Wednesday, 27 September 2017

ನಾಲಗೆಯ ಕಟ್ಟಿದವನು... ಸಾವನ್ನೂ ಗೆಲ್ಲುವನು!!(A hold on the tongue conquers even Death!!)



          ಇದೇನಿದು?? ನಾಲಿಗೆಯನ್ನು ಕಟ್ಟುವುದೆಂದರೆ ಏನರ್ಥ?? ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ?? ನಾಲಿಗೆಯನ್ನು ಕಟ್ಟುವುದೆಂದರೆ ಬಾಯಿಗೆ ರುಚಿಯೆಂದು ಅನಿಸಿದರೂ ಎಲ್ಲವನ್ನೂ ತಿನ್ನದಿರುವುದು!! ಹಾಗೆಯೇ ರುಚಿಯಿಲ್ಲದಿದ್ದರೂ ಆರೋಗ್ಯಕ್ಕೆ ಒಳ್ಳೆಯದೆಂದು ಮನಸ್ಸಿಟ್ಟು ತಿನ್ನುವುದು!! ಒಟ್ಟಾರೆಯಾಗಿ ನಮ್ಮ ನಾಲಿಗೆಯನ್ನು ನಮ್ಮ ವಶದಲ್ಲಿ ಇಟ್ಟುಕೊಳ್ಳುವುದು... ಶರೀರಕ್ಕೆ ಏನು ಬೇಕು, ಏನು ಬೇಡ ಎಂದು ತಿಳಿದುಕೊಂಡು ಆಹಾರ ಸೇವಿಸಿದಾಗ ನಾವು ಹೆಚ್ಚು ಆರೋಗ್ಯವಂತರಾಗಿದ್ದು ದೀರ್ಘಕಾಲ ಬಾಳಬಹುದು... ಅಂದರೇ ಸಾವನ್ನೇ ಗೆದ್ದಂತೆ ಅಲ್ಲವೇ??  ಹೇಗೆ ... ಮುಂದೆ ಓದಿ....

         ನಾಲಿಗೆಯ ಮೇಲೆ ಹಿಡಿತವಿಲ್ಲದೆ ತಿನ್ನಲು ರುಚಿಕರವೆಂದು ಬಗೆ ಬಗೆಯ ಆಹಾರ ತಿಂದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ... ಇದನ್ನು "ರಾಜಸಿಕ ಗುಣ"ವೆಂದು ತಿಳಿಯಬಹುದು.
ಕಟ್ವಮ್ಲಲವಣಾತ್ಯುಷ್ಣತೀಕ್ಷ್ಣ ರೂಕ್ಷ ವಿದಾಹಿನಃ|
ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ||
(ಭಗವದ್ಗೀತೆ, ಅಧ್ಯಾಯ 17, ಶ್ಲೋಕ 9)
ಕಹಿ, ಹುಳಿ,ಉಪ್ಪು,ಹೆಚ್ಚು ಬಿಸಿ, ಖಾರ, ಒಣಗಿದ ಮತ್ತು ಸುಡುತ್ತಿರುವ ಆಹಾರಗಳು ರಾಜಸ ಗುಣದವರಿಗೆ ಹೆಚ್ಚು ಇಷ್ಟವಾಗುವುದು. ಇಂಥ ಆಹಾರಗಳು ದುಃಖ, ಶೋಕ( ಬೇಜಾರು/ಅಸ್ವಸ್ಥತೆ) ಹಾಗೂ ಆಮಯ ಅಂದರೆ ಕಾಯಿಲೆಯನ್ನು ಉಂಟುಮಾಡುತ್ತವೆ.
           ಇದಕ್ಕೊಂದು ಅತ್ಯುತ್ತಮ ಉದಾಹರಣೆಯೆಂದರೆ ಗೋಭಿಮಂಚೂರಿ!! ಮೇಲೆ ತಿಳಿಸಿದ ಎಲ್ಲಾ ರುಚಿಗಳು ಅದರಲ್ಲಿ ಇದೆ. ತಿನ್ನುವ ಮೊದಲು 'ಒಂದು ಪ್ಲೇಟ್ನಲ್ಲಿ ಎಂಟೇ ತುಂಡಿದೆಯಲ್ಲ!!' ಎಂಬ ದುಃಖ ಒಂದುರೀತಿಯದಾದರೆ ತಿಂದಮೇಲೆ  ಹೊಟ್ಟೆಯಾಕೋ ಸರಿಯಿಲ್ಲ/ಹಸಿವೆಯೇ ಇಲ್ಲ.. ಶರೀರ ಪೂರ್ತಿಜಡ.. ಮಾರನೆಯ ದಿನ ಮಲವೂ ಬಾರದು... ಅದೇ ದುಃಖ!! 'ಯಾಕೆ ಗೋಭಿಮಂಚೂರಿ ತಿಂದೆನಪ್ಪಾ ಎಂದು' ಸಂಕಟಪಡುವುದೇ ಶೋಕ!! ಮತ್ತೆ ಮತ್ತೆ ಅದನ್ನೇ ತಿಂದು... ತಿಂಗಳು ಕಳೆದ ಮೇಲೆ ಹೊಟ್ಟೆನೋವು ಹೆಚ್ಚಾಯಿತೆಂದು ವೈದ್ಯರ ಬಳಿ ಹೋದಾಗ "ಹೊಟ್ಟೆ ಹುಣ್ಣು" ಎಂದು ಹೇಳುತ್ತಾರೆ.. ಅದಲ್ಲವೇ ಆಮಯ/ ಕಾಯಿಲೆ??!!

ಮಿತಾಹಾರ ಶರೀರಕ್ಕೆ ಆರೋಗ್ಯಕರ
ಸುಸ್ನಿಗ್ಧಮಧುರಾಹಾರಶ್ಚಚತುರ್ಥಾಂಶವಿವರ್ಜಿತಃ|
ಭುಜ್ಯತೇ ಶಿವಸಂಪ್ರೀತ್ಯೈ ಮಿತಾಹಾರಃ ಉಚ್ಯತೇ||
(ಹಠಯೋಗ ಪ್ರದೀಪಿಕಾ, ಅಧ್ಯಾಯ 1, ಶ್ಲೋಕ 58)
ಸ್ನಿಗ್ಧ ಹಾಗೂ ಮಧುರವಾದ (ತಿನ್ನಲು ಹಿತವೆನಿಸುವ; ಉದಾ: ಕಿಚಡಿ, ಸಿಹಿ ಪೊಂಗಲ್, ರಾಗಿ ಅಂಬಲಿ.. ಸಾಕಷ್ಟು ತುಪ್ಪದೊಂದಿಗೆ ಸೇವಿಸಿದಾಗ ಸ್ನಿಗ್ಧವೂ, ಮಧುರ(ರುಚಿಕರ)ವೂ ಆಗಿರುತ್ತದೆ) ಆಹಾರವನ್ನು ಸೇವಿಸಬೇಕು... ಹೊಟ್ಟೆಯ ಕಾಲು ಭಾಗ ಖಾಲಿ ಬಿಟ್ಟಿರಬೇಕು. ಶಿವನಿಗೆ/ ದೇವರಿಗೆ ಮಾಡಿದ ನೈವೇದ್ಯವೆಂದು ತಿಳಿದು ಸೇವಿಸುವ ಆಹಾರವೇ ಮಿತಾಹಾರ.
             ಈ ಶ್ಲೋಕ ಸಂಪೂರ್ಣ ಸೊಗಸಾಗಿರುವುದೇ ಇಲ್ಲಿ... ಅದೆಷ್ಟೋ ಬಾರಿ ಮದುವೆ ಊಟಕ್ಕೆ ಹೋದಾಗ ಅಷ್ಟು ದೂರದಿಂದ ಬಂದಿದ್ದೇವಲ್ಲಾ ಎಂದು ಕಂಠಮಟ್ಟ ತಿಂದರೆ ಅದು ತಪ್ಪು!! ಅಜೀರ್ಣಕ್ಕೆ ಅದೇ ಮೂಲ. ಕಾಲು ಭಾಗ ಖಾಲಿ ಬಿಟ್ಟಾಗ ತಿಂದಿದ್ದೆಲ್ಲವೂ ಚೆನ್ನಾಗಿ ಜೀರ್ಣವಾಗಿ ಶರೀರಕ್ಕೆ ಬೇಕಾದ ಪೋಷಕಾಂಶಗಳು ಸಂಪೂರ್ಣವಾಗಿ ದೊರೆಯುತ್ತದೆ. (ಪ್ರಕೃತಿ ಚಿಕಿತ್ಸೆಯ ರೀತಿಯಲ್ಲಿ ನೋಡಿದರೂ ಹೊಟ್ಟೆಯ ಅರ್ಧಾಂಶ ಆಹಾರ, ಕಾಲಂಶ ನೀರು ಇನ್ನುಳಿದ ಕಾಲಂಶ ಖಾಲಿ ಇರಬೇಕು). ಇನ್ನು ದೇವರಿಗೆ ಅರ್ಪಿಸಿದ ನೈವೇದ್ಯವೆಂದು ತಿನ್ನುವುದೆಂದರೆ ಹೇಗೆ? ದೇವಸ್ಥಾನದಲ್ಲಿ ಸಿಕ್ಕಿದ ನೈವೇದ್ಯವನ್ನು ಒಂದಗಳೂ ಬಿಡದೇ ತಿನ್ನುತ್ತೇವಲ್ಲವೆ??!! (ಕೆಲವರು ಬೆರಳನ್ನೂ ಚೀಪಿ ಚೀಪಿ ಆಸ್ವಾದಿಸುತ್ತಾರೆ!!)ಹಾಗೆ ತಿನ್ನಬೇಕು.. ಅದು ಬಿಟ್ಟು "ಅಯ್ಯೋ ... ಹೇಟ್ ಬೆಳ್ಳುಳ್ಳಿ... ಒಗ್ಗರಣೆಯ ಬೇವಿನ ಸೊಪ್ಪು ತಿನ್ನಲ್ಲಪ್ಪ!!"  ಎನ್ನುವುದಲ್ಲ. ಶರೀರದ ರೋಗನಿರೋಧಕ ಶಕ್ತಿ ಹೆಚ್ಚಲು ಸಿಗುವ "ಆಂಟಿಆಕ್ಸಿಡೆಂಟ್ಸ್" ಇರುವುದೇ ಅದರಲ್ಲಿ. ಕೆಲವರು ಸಾಂಬಾರ್, ರಸಂ ನಿಂದ ಟೋಮೇಟೊ ಸಿಪ್ಪೆ, ಕೊತ್ತಂಬರಿ ಸೊಪ್ಪನ್ನೂ ಪ್ರಯಾಸದಿಂದ ಹೆಕ್ಕಿ ಬದಿಗಿರಿಸುವುದು ನೋಡಿದಾಗ ನಗು ಬರುತ್ತದೆ, ಬೇಜಾರೂ ಆಗುತ್ತದೆ!! ಒಟ್ಟಿನಲ್ಲಿ ಬಟ್ಟಲಿಗೆ ಬಿದ್ದ ಎಲ್ಲಾ ತಿನ್ನುವಂಥ ಪದಾರ್ಥಗಳಲ್ಲಿ ಯಾವುದನ್ನೂ ಬಿಡದೆ ತಿನ್ನಬೇಕು. (ಹಾಗೆಂದು ಸಲಾಡ್ ನಲ್ಲಿ ಖಾರವಾದ ಮೆಣಸಿನಕಾಯಿ ದೊರೆತರೆ ಅದನ್ನೂ ತಿಂದು ನನಗೆ ಶಾಪ ಹಾಕಬೇಡಿ!!)

ನಾಲಗೆಯ ಕಟ್ಟಿಹನು ಕಾಲನಿಗೆ ದೂರಿಹನು|
ನಾಲಗೆಯ ರುಚಿಯ ಮೇಲಾಡುವನು|
ಕಾಲನಿಗೆ ಹತ್ತಿರವು ಸರ್ವಜ್ಞ|| (ಉಲ್ಲೇಖ: ಸರ್ವಜ್ಞನ ತ್ರಿಪದಿಗಳು)
ತಿಳಿಯಿತೇ??... ನಾಲಿಗೆಯ ಮೇಲೆ ಹಿಡಿತ ಸಾಧಿಸಿದವನು ಕಾಲನಿಂದ/ ಸಾವಿನಿಂದ ದೂರ ಇರುತ್ತಾನೆ. ಬದಲಾಗಿ ಬಾಯಿಗೆ ರುಚಿಯೆಂದು ಎಲ್ಲವನ್ನೂ ತಿನ್ನುವವನು ಕಾಲನಿಗೆ/ ಸಾವಿಗೆ/ ಅನಾರೋಗ್ಯಕ್ಕೆ ಹತ್ತಿರದವನಾಗುತ್ತಾನೆ.
(A hold on the tongue conquers even Death!!)


  • ಡಾ.ಪುನೀತ್ ರಾಘವೇಂದ್ರ ಕುಂಟುಕಾಡು BNYS,MD Yoga Clinical 

2 comments:

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...