Friday 22 September 2017

ರೋಗ ಗುಣಪಡಿಸಲು ಔಷಧಿ, ಮಾತ್ರೆಗಳಷ್ಟೇ ಸಾಕೇ?! ಮಣಿ,ಮಂತ್ರ,ಹೋಮ,ಹವನಾದಿಗಳೂ ಬೇಕೆ?! (Is it just like medicine and pills to treat the disease?? or Mantra, Worship of God is also equally important ??)


"ಡಾಕ್ಟ್ರೇ... ಹೊಟ್ಟೆನೋವು ಶುರುವಾಗಿ ಸುಮಾರು ಐದು ವರ್ಷಗಳ ಮೇಲೆಯೇ ಆಗಿತ್ತು. ಎಲ್ಲಾ ಬಗೆ ಔಷಧಿ ಆಯಿತು. ಆಲೋಪಥಿ, ನ್ಯಾಚುರೋಪಥಿ, ಹೋಮಿಯೋಪಥಿ ಎಲ್ಲಾ ವೈದ್ಯರುಗಳತ್ತ ತೋರಿಸಿ ಕೊನೆಗೆ ಭವರೋಗ ವೈದ್ಯನೇ ಗುಣಪಡಿಸಪ್ಪಾ ಎಂದು ತಿರುಪತಿಗೂ ಹೋಗಿ ಬಂದಿದ್ದೆ. ಆದರೆ ಫಲಿತಾಂಶ ಶೂನ್ಯ!! ಕಳೆದ ತಿಂಗಳು ನಮ್ಮ ಪಕ್ಕದ ಮನೆಗೆ ಒಬ್ಬ ಜ್ಯೋತಿಷ್ಯರು ಬಂದಿದ್ದರು. ನನ್ನ ಜಾತಕ ನೊಡಿ, ಗ್ರಹ ದೋಷ ಎಂದು ಒಂದು ಪೂಜೆ ಮಾಡಿಸಲು ಹೇಳಿದರು. ಹಾಗೆಯೇ ಬೆರಳಿಗೆ ಧರಿಸಲು ಮಣಿ ಉಂಗುರವನ್ನೂ ಕೊಟ್ಟಿದ್ದಾರೆ.ಅಲ್ಲಿಂದ ಮೇಲೆ ಹೊಟ್ಟೆ ನೋವು ಮಂಗಮಾಯ!! ಇದು ಹೇಗೆ? ಅಂದರೆ ಔಷಧ, ಮಾತ್ರೆ ಎಲ್ಲಾ ಬರೀ ನೆಪವೇ?? ಗೊತ್ತಾಗ್ತಿಲ್ಲ!!" ವೃತ್ತಿಯಲ್ಲಿ ವಿಜ್ಞಾನದ ಅಧ್ಯಾಪಕರಾಗಿರುವ ಶಂಕರ್ ಹೇಳಿದ ಮಾತು ಕೇಳಿ ನಾನೂ ತಲೆಗೆ ಹುಳ ಬಿಟ್ಟುಕೊಂಡೆ!! ಹೌದು... ಯೋಚಿಸಬೇಕಾದ ವಿಷಯವೇ!! ಅದೆಷ್ಟೋ ಬಾರಿ ವೈದ್ಯರು ಕೈಚೆಲ್ಲಿದರೂ ರೋಗಿ ಸಾವಿನಿಂದ ದೂರವಾಗಿದ್ದಾನೆ. ಅಲ್ಲಿ ಯಾವುದೋ ಹಳ್ಳಿ ಔಷಧ, ದೇವರಿಗೆ ಹೊತ್ತ ಹರಕೆ, ಮಾಡಿಸಿದ ಪೂಜೆ,ಕರ್ಮ... ಇವುಗಳೆಲ್ಲಾ ಹೇಗೆ ಸಾಧ್ಯ??!! ಹುಡುಕಿ ನೋಡಲು ನನ್ನ ವಿಜ್ಞಾನದ ಪುಸ್ತಕಗಳಲ್ಲಿ ಏನೂ ಇಲ್ಲ... ಕೊನೆಗೆ ಸನಾತನ ಭಾರತೀಯ ಸಂಸ್ಕೃತಿಯ ಆಳಕ್ಕೆ ಇಳಿದಾಗ ಒಂದು ಕಡೆ ಸೂಕ್ತ ಮಾಹಿತಿ ದೊರೆಯಿತು....

ಪೂರ್ವಜನ್ಮಕೃತಪಾಪಂ ವ್ಯಾಧಿರೂಪೇಣ ಬಾಧತೇ |
ತಶ್ಶಾನ್ತಿಃ ಔಷಧೈರ್ದಾನೈಃ ಜಪಹೋಮ ಕ್ರಿಯಾಧಿಭಿಹಿಃ  ||
(ವಾಚಸ್ಪತಿ ಮಿಶ್ರ, ವೀರಸಿಂಹಾವಲೋಕನ (?))
ಹಿಂದಿನ ಜನ್ಮದಲ್ಲಿ ನಾವು ಮಾಡಿದ ಪಾಪ ಕರ್ಮಗಳೇ ಇಂದಿನ ಜನ್ಮದಲ್ಲಿ ಕಾಯಿಲೆಯ ರೂಪದಲ್ಲಿ ಬಾಧಿಸುತ್ತಿರುತ್ತದೆ. ಹಾಗಾಗಿ ಕಾಯಿಲೆಯ ನೋವುಗಳನ್ನು ಕಡಿಮೆಗೊಳಿಸಲು ಇರುವ ಕಾರ್ಯಗಳೇ ಔಷಧ,ದಾನ,ಜಪ,ಹೋಮ ಇತ್ಯಾದಿ...
(ಇತಿ ವಾಚಸ್ಪತ್ಯೇ ಕರ್ಮವಿಪಾಕಶಬ್ದಸ್ಯ ನಿರೂಪಣಕಾಲೇ ಉಲ್ಲಿಖಿತಮಸ್ತಿ : ರೀತಿಯಾಗಿ ವಾಚಸ್ಪತಿಯವರು ಕರ್ಮವಿಪಾಕಶಬ್ದವನ್ನು ವಿವರಿಸುವಾಗ ಉಲ್ಲೇಖಿಸಿದ್ದಾರೆ ;  ನನಗೆ ದೊರೆತ ಮಾಹಿತಿ)

ನಮ್ಮಲ್ಲಿ ಉದ್ಭವಿಸುವ ಮೊದಲನೇ ಪ್ರಶ್ನೆ ಪೂರ್ವಜನ್ಮ, ಪಾಪಕರ್ಮ ಎಂಬುದು ನಿಜವೇ ? ಇದಕ್ಕೆ ನಾನು ಬರೆದ "ಕಾಯಿಲೆಗಳು ನನಗೇ ಏಕೆ ಬರುತ್ತವೆ?" ಲೇಖನವನ್ನು ಓದಿ.. ಸಂಪೂರ್ಣವಾಗಿ ವಿವರಿಸಿದ್ದೇನೆ. ಇನ್ನು ಶಮನ ಕಾರ್ಯಗಳನ್ನು ಗಮನಿಸೋಣ..
ಔಷಧ: ಅನಾರೋಗ್ಯ ಬಂದಾಗ ಹೇಗೆ ಗುಣಪಡಿಸುತ್ತದೆಂದು ಎಲ್ಲರಿಗೂ ತಿಳಿದೇ ಇದೆ.
ದಾನ : ಇತರರಿಗೆ ದಾನ ಮಾಡಿದಾಗ ನಮ್ಮ ಕೊಳೆಯನ್ನು ತೊಳೆದುಕೊಂಡಂತೆ ಅರ್ಥಾತ್ ನಮ್ಮ ಪಾಪ ಕರ್ಮಗಳನ್ನು ಕಳೆದುಕೊಂಡಂತೆ.
ಜಪ/ತಪ : ಮತ್ತೆ ಮತ್ತೆ ಭಗವನ್ನಾಮವನ್ನಾಗಲೀ, ಮಂತ್ರವನ್ನು ಜಪಿಸುವ ಕಾರ್ಯವೇ ತಪ.
ಕಾಯೇಂದ್ರಿಯ ಸಿದ್ಧಿರಶುದ್ಧಿಕ್ಷಯಾತ್ ತಪಸಃ || ( ಪತಂಜಲಿ ಯೋಗ ಸೂತ್ರ , ಪಾದ 2, ಸೂತ್ರ 43)
ದೇಹ ಮತ್ತು ಇಂದ್ರಿಯಗಳನ್ನು ಸಂಪೂರ್ಣ ಹಿಡಿತ ಸಾಧಿಸಿ, ಅಶುದ್ಧಿಗಳನ್ನು ಕಡಿಮೆಗೊಳಿಸುವುದೇ ತಪ. ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ದೇಹದ ಮೇಲೆ ಹಿಡಿತ ಎಂದರೆ ಉದಾಸೀನ ಬಿಟ್ಟು ದೈಹಿಕ ಚಟುವಟಿಕೆಗೆ ತೊಡಗಿದಾಗ,ಇಂದ್ರಿಯಗಳ ಮೇಲೆ ಹಿಡಿತ ಎಂದರೆ ನಾಲಗೆಗೆ ರುಚಿ ಎಂದು ಬಗೆಬಗೆಯ "ಫಾಸ್ಟ್ ಫುಡ್" ತಿನ್ನುವುದನ್ನು ನಿಲ್ಲಿಸಿದಾಗ ಅಜೀರ್ಣ,ಹೊಟ್ಟೆ ಉರಿ ಮುಂತಾದ ಸಮಸ್ಯೆಗಳು ಅಷ್ಟಾಗಿ ಬರುವುದಿಲ್ಲ.. ಅಲ್ಲವೇ??
ಮಂತ್ರ : ಮಂತ್ರಗಳನ್ನು ಉಚ್ಚರಿಸುವಾಗ ಶರೀರದಲ್ಲಿ ಉಂಟಾಗುವ ಧನಾತ್ಮಕ ಕಂಪನಗಳು ನೋವು ಕಡಿಮೆಗೊಳಿಸಲು ಸಹಾಯಕಾರಿಯಾಗಬಹುದು.
ಹೋಮ : ಹೋಮ, ಹವನ ಮಾಡಿದಾಗ ನಮ್ಮ ಸುತ್ತಲಿನ ವಾತಾವರಣವೂ ಧನಾತ್ಮಕ ಕಂಪನಗಳಿಂದ ತುಂಬುತ್ತದೆ. ಉದಾ: ಪೂಜೆಯಲ್ಲಿ ಭಾಗವಹಿಸಿದಾಗ ದೊರೆಯುವ ಮನಃಶಾಂತಿ ಚಲನಚಿತ್ರ ನೋಡಿ ಬರುವಾಗ ಅನುಭವಿಸುವ ಸುಖಕ್ಕಿಂತ ಸಂಪೂರ್ಣ ಭಿನ್ನವಾಗಿರುತ್ತದೆ!!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರೋಗಗುಣಪಡಿಸಲು ಮೂರೂ ಆಯಾಮಗಳು ಮುಖ್ಯ.
ಮಣಿ: ಹರಳುಗಳು ಅರ್ಥಾತ್ ಜೆಮ್ ಥೆರಪಿ
ಮಂತ್ರ : ಪೂಜೆ, ಹೋಮ, ಅರ್ಚನೆ, ತೀರ್ಥಕ್ಷೇತ್ರ ದರ್ಶನ, ದಾನ, ಜಪ ಇತ್ಯಾದಿ
ಔಷಧ: ಮಾತ್ರೆ, ಕಷಾಯ, ಲೇಹ, ವ್ಯಾಯಾಮ, ಆಹಾರ ಕ್ರಮ ಇವುಗಳು

ರೋಗ ಗುಣಪಡಿಸಲು ದೇವತಾರಾಧನೆಯೂ ಬೇಕೇ?
ನನ್ನ ಪ್ರಕಾರ ಖಂಡಿತವಾಗಿಯೂ ಬೇಕು.. "ಸಂಕಟ ಬಂದಾಗ ವೆಂಕಟರಮಣ" ಎಂದಾದರೂ ಕಷ್ಟ ಬಂದಾಗ ನಾವು ಕಷ್ಟಗಳ ಕುರಿತಾಗಿ ಜಾಸ್ತಿ ಆಲೋಚಿಸದೆ "ದೇವರೇ..ಎಲ್ಲಾ ನೀನೇ ನೋಡಿಕೊಳ್ಳಪ್ಪಾ!!" ಎಂದುಕೊಳ್ಳುತ್ತೇವೆ. ಇದಲ್ಲವೇ ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುವ ಒಂದು ವಿಧಾನ? ದೇಹದ "ಸ್ಟ್ರೆಸ್ ಹಾರ್ಮೋನ್- ಕಾರ್ಟಿಸೋಲ್" ಪರಿಣಾಮ ಕಡಿಮೆ ಮಾಡಲು ಇದೂ ಒಂದು ಮಾರ್ಗವಲ್ಲವೇ?  ಕಾರ್ಟಿಸೋಲ್ ನ ಪರಿಣಾಮ ಕಡಿಮೆಯಾದಂತೆ ದೇಹದ ಸಕ್ಕರೆಯ ಅಂಶ, ರಕ್ತದೊತ್ತಡ ಕಡಿಮೆಯಾಗಿ, ರೋಗನಿರೋಧಕ ಶಕ್ತಿ ಹೆಚ್ಚುವುದು. ಅಂದರೆ ದೇವತಾರಾಧನೆಯಿಂದ ಶರೀರ ಆರೋಗ್ಯವಂಥವಾಗುವುದು ಎಂದಾಯ್ತಲ್ಲ??!!  ಇದನ್ನೇ ದಾಸರೂ ಹೇಳಿದ್ದು "ಮರೆಯಬೇಡ ಮನವೆ ನೀನು ಹರಿಯ ಚರಣವ.. ಸತಿಯು ಸುತರು ಗತಿಯು ಎಂದು ಮತಿಯ ಕೆಟ್ಟು ತಿರುಗಬೇಡ.. ಮತಿಯು ಕೆಟ್ಟು ಹೋದ ಮೇಲೆ ಸತಿಯು ಸುತರು ಬರುವರೇನು?" ನನ್ನ ಸಂಸಾರ, ಮಕ್ಕಳು ಎಂದು ಸಾಕಷ್ಟು ಒತ್ತಡದಿಂದ ಆಸ್ತಿ-ಪಾಸ್ತಿ ಗಳಿಸಿದರೆ ಕೊನೆ ಕಾಲದಲ್ಲಿ ಅನಾರೋಗ್ಯದ ಗೂಡಾದ ದೇಹ  ಆಸ್ಪತ್ರೆಯಲ್ಲಿರುತ್ತದೆ.. ಜೊತೆಗೆ ಮಕ್ಕಳು, ಹೆಂಡತಿ ಇದ್ದರೂ ಅನುಭವಿಸುವ ನೋವು ಅವನೊಬ್ಬನೇ!!
ಹಾಗೆಂದು ಸಾವಿರಾರು ರೂಪಾಯಿ ಖರ್ಚುಮಾಡಿ ಮಾಡಿದ ಪೂಜೆಯೇ ಆಗಬೇಕೆ? ಏಕೆಂದರೆ ಟಿ.ವಿ. ಜ್ಯೋತಿಷ್ಯ, ಪೂಜೆ, ಅರ್ಚನೆ ಕೆಲವರಿಗೆ ಇಂದು ಹಣ ಮಾಡುವ ಮಾರ್ಗಗಳಾಗಿವೆ!! (ಜನರ, ಸಮಾಜದ ಚಿಂತಕರೂ ಇಲ್ಲವೆಂದಲ್ಲ... ಆದರೆ ಅಂಥವರು ಸಿಗುವುದು ಬಲು ಅಪರೂಪ!!) ಅದಕ್ಕೇ ಶ್ರೀಕೃಷ್ಣ ನೇ ಹೀಗೆಹೇಳಿದ್ದಾನೆ

ಪತ್ರಂ ಪುಷ್ಪಂ ಫಲಂ ತೋಯಂ ತೋ ಮೇ ಭಕ್ತ್ಯಾ ಪ್ರಯಚ್ಛತಿ |
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ||
(ಭಗವದ್ಗೀತೆ , ಅಧ್ಯಾಯ 9, ಶ್ಲೋಕ 26)
ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಗಳಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಒಂದಿಷ್ಟು ನೀರನ್ನು ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುತ್ತೇನೆ. ಅರ್ಥಾತ್ ಇಲ್ಲಿ ಭಕ್ತಿಯಿಂದ ಪ್ರಾರ್ಥಿಸುವುದು ಮುಖ್ಯ!!

ನಮ್ಮ ಸನಾತನ ಹಿಂದೂ ಧರ್ಮದ ಪ್ರಕಾರ ಆರೋಗ್ಯ ಗುಣಪಡಿಸಿಕೊಳ್ಳಲು ಕೇವಲೂ ಔಷಧಿಯೊಂದೇ ಸಾಲದು. ಮಣಿ, ಮಂತ್ರ, ಪೂಜೆಗಳೂ ಬೇಕು. ಇದು ಕೇವಲ ಹಿಂದೂ ಧರ್ಮಕ್ಕಷ್ಟೇ ಸೀಮಿತವಲ್ಲ. ಎಲ್ಲಾ ಧರ್ಮಗಳಲ್ಲೂ ಇದೆ. ಇಸ್ಲಾಂ ಧರ್ಮದಲ್ಲಿ ಫಕೀರರು ಔಷಧಿ ಕೊಟ್ಟು, ದೇವರ ಸ್ತೋತ್ರಗಳನ್ನು ಜಪಿಸಿ ಆಶೀರ್ವದಿಸುತ್ತಾರೆ. ಕ್ರೈಸ್ತ ಧರ್ಮದಲ್ಲೂ ಶುದ್ಧೀಕಾರ್ಯ, ಪ್ರಾರ್ಥನೆ, ಬಲಿಪೂಜೆ ಮೊದಲಾದ ಕ್ರಮಗಳಿವೆ. ಹೀಗೇ ಇತರ ಧರ್ಮಗಳಲ್ಲೂ ಕೂಡ ಅದರದ್ದೇ ಆದ ಆಚರಣೆಗಳಿವೆ... ಆದರೆ ಒಟ್ಟಾರೆಯಾಗಿ ಯಾವುದೇ ರೋಗಿಯ ಕಾಯಿಲೆ ಸಂಪೂರ್ಣವಾಗಿ ಗುಣಪಡಿಸಿಸಲು ಬೇಕಾಗಿರುವ ಅತೀ ಮುಖ್ಯ ಔಷಧ "ನಂಬಿಕೆ". ಇಲ್ಲದಿದ್ದರೆ ಯಾವುದೇ ಪ್ರಾರ್ಥನೆಯೇ ಆಗಲಿ, ಮಾತ್ರೆ, ಕಷಾಯಗಳೇ ಆಗಲಿ ಸಂಪೂರ್ಣ ನಿಷ್ಪ್ರಯೋಜಕ ಎನ್ನುವುದಂತೂ ಸತ್ಯ!! (ಹಾಗೆಂದು ಜ್ವರ ಬಂದರೆ ದೇವರು ಗುಣಪಡಿಸುತ್ತಾನೆಂದು ಮನೆಯಲ್ಲಿಯೇ ಪ್ರಾರ್ಥನೆ ಮಾಡುತ್ತಾ ಕುಳಿತುಕೊಳ್ಳಬೇಡಿ. ವೈದ್ಯರ ಹತ್ತಿರ ಹೋಗಿ,ಸೂಕ್ತ ಔಷಧೋಪಚಾರಗಳನ್ನೂ ತೆಗೆದುಕೊಳ್ಳಿ!!)

(ಚಿತ್ರಕೃಪೆ: ವೇದಮೂರ್ತಿ ಶ್ರೀ ವೆಂಕಟೇಶ್ವರ ಭಟ್)
(Is it just like medicine and pills to treat the disease?? or  Mantra, Worship of God is also equally important ?? 
  • ಡಾ.ಪುನೀತ್ ರಾಘವೇಂದ್ರ ಕುಂಟುಕಾಡು BNYS,MD Yoga Clinical 

2 comments:

  1. ಬಹಳ ಚೆನ್ನಾಗಿ ೂಡಿಬಂದಿದೆ ಪುನೀತ್

    ReplyDelete

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...