Saturday, 17 June 2017

ಯೋಗ್ಯ ಯೋಗ; ಆಗದಿರಲಿ ಅಯೋಗ್ಯ!!!



                                  "ಡಾಕ್ಟ್ರೇ... ಕಳ್ದ ವರ್ಷ ಬಿ.ಪಿ.,ಶುಗರ್ ಅದರ ಮೇಲೆ ಒಂದಷ್ಟು ಕೊಲೆಸ್ಟ್ರಾಲ್ ನನ್ನ ಸ್ವಯಾರ್ಜಿತ ಆಸ್ತಿಗಳಾದ್ವು. ಫಿಜಿಶಿಯನ್ಗೆ ತೋರುಸ್ದಾಗ ತಲೆಯಿಂದ ಕಾಲು ಬುಡದವರೆಗೆ ದಿಟ್ಟಿಸಿ ನೋಡಿ ನಿಮ್ಮ್ ಮೈಯಲ್ಲಿ ಕೊಬ್ಬು ಒಂದು ವರ್ಷಕ್ಕಾಗೋವಷ್ಟಾಗಿದೆ. ಡಯಟ್, ಯೋಗ ಆರಂಭಿಸಿ ಅಂದ್ರು. ಒಂದಷ್ಟು ಯೋಗ ಪುಸ್ತಕಗಳು, ಹಂಗೇ ಟಿ.ವಿ. ನೋಡ್ತಾ ಯೋಗಾಭ್ಯಾಸ ಶುರು ಮಾಡ್ದೆ. ಆದ್ರೂ ಬಿ.ಪಿ., ಶುಗರ್ ಬ್ಯಾಂಕ್ ಬಡ್ಡಿ ತರ ಏರ್ತಾ ಇದೆ. ಏನ್ ಮಾಡ್ಲಿ?" ಎಂದಿದಕ್ಕೆನಾನು ನೀವು ಮಾಡೋ ಅಭ್ಯಾಸ ಮಾಡ್ ತೋರ್ಸಿ ಅಂದೆ. ಹಂಗೇ ಕೂತ್ಕೊಂಡ್ಬಿಟ್ಟು ಕಪಾಲಭಾತಿ ಮಾಡಿದ್ರು. ಶ್ವಾಸ ಬಿಡೋ ವೇಗಕ್ಕೆ ನನ್ ಕ್ಲಿನಿಕ್ ಕ್ಯಾಲೆಂಡರ್ ಕಿಟಕಿಯಿಂದ ಹಾರಿ ಬಾಲ್ಕನಿಗೆ ಬಿತ್ತು!!! ನೋಡುದ್ರೆ ನಮ್ ಸಾಹೇಬ್ರು ಶಿರಾಡಿ ಘಾಟಿಲಿ ಏರಿಬರೋ ಗ್ಯಾಸ್ ಟ್ಯಾಂಕರ್ ತರ ಏದುಸ್ರು ಬಿಡ್ತಿದ್ದಾರೆ!!ಇದೆಲ್ಲ ತಮ್ಮಷ್ಟಕ್ಕೆ ಯೋಗಾಭ್ಯಾಸ ಆರಂಭಿಸಿರೋ ಪರಿಣಾಮ. ಇದು ರೋಗ ಕಡಿಮೆ ಮಾಡೋ ಬದ್ಲು ಅನಾರೋಗ್ಯಕ್ಕೆ ಮೂಲ.
                        ಹೌದು ಫ್ರೆಂಡ್ಸ್... ಇಂದು ಯೋಗ ಅಭ್ಯಾಸ ಫ್ಯಾಶನ್ ಆಗಿ ಬದಲಾಗುತ್ತಿದೆ. ಅದರಲ್ಲೂ ಜೂನ್ 21ಕ್ಕೆ "ವಿಶ್ವ ಯೋಗ ದಿನ" ಬಂದ ಮೇಲಂತೂ ಯೋಗದ ಕ್ರೇಜ್ಃ ಮೂರು ಪಟ್ಟು ಹೆಚ್ಚಾಗಿದೆ. ಗಲ್ಲಿ ಗಲ್ಲಿಗೊಂದು ಯೋಗ ತರಗತಿಗಳೂ ತಲೆಯೆತ್ತುತ್ತಿವೆ. ಸಮಾಜದ ಸ್ವಾಸ್ಥ್ಯಕ್ಕೆ ಇದೊಂದು ಉತ್ತಮಕರ ಬೆಳವಣಿಗೆಯೂ ಹೌದು. ಆದರೆ ಯಾವುದೇ ಗುರುಗಳ ಮೂಲಕ ಕಲಿಯದೇ, ತಮ್ಮಷ್ಟಕ್ಕೆ ಕೇವಲ ಟಿ.ವಿ. , ಯೂಟ್ಯೂಬ್ ಮುಂತಾದ ವೀಡಿಯೋ ಅಥವಾ ಪುಸ್ತಕಗಳ ಮೂಲಕ ಕಲಿತು ಮಾಡುವ ಆಸನ, ಪ್ರಾಣಾಯಾಮಗಳ ಅಭ್ಯಾಸ ಒಳ್ಳೆಯದಲ್ಲ.

"ಪ್ರಾಣಾಯಾಮೇನ ಯುಕ್ತೇನ ಸರ್ವರೋಗ ಕ್ಷಯೋ ಭವೇತ್!
ಅಯುಕ್ತಾಭ್ಯಾಸ ಯೋಗೇನ ಸರ್ವರೋಗ ಸಮುದ್ಭವಃ!!"
(ಹಠಯೋಗ ಪ್ರದೀಪಿಕಾ, ಅಧ್ಯಾಯ 2, ಶ್ಲೋಕ 16)
ಪ್ರಾಣಾಯಾಮವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಿದಲ್ಲಿ ಸರ್ವರೋಗಗಳೂ ಗುಣವಾಗುವುದು. ತಪ್ಪಾದ ರೀತಿಯಲ್ಲಿ ಯೋಗವನ್ನು ಅಭ್ಯಾಸ ಮಾಡಿದರೆ ಸರ್ವ ರೋಗಗಳೂ ಉಲ್ಭಣಗೊಳ್ಳುವುದು.

ಕ್ರಮಬದ್ಧವಾಗಿ ಎಂದರೇನು?
*ಯಾವುದೇ ಆಸನ, ಪ್ರಾಣಾಯಾಮಗಳನ್ನು ಸೂಕ್ತ ಗುರುಗಳ ಮೂಲಕವೇ ಕಲಿತು ಅಭ್ಯಾಸ ಆರಂಭಿಸಬೇಕು.
*ಪ್ರಾಣಾಯಾಮದ ಅಭ್ಯಾಸಕ್ಕೆ ಕುಳಿತಾಗ ಬೆನ್ನು, ಕತ್ತು ನೇರವಾಗಿದ್ದು, ಕಣ್ಣುಗಳನ್ನು ಮುಚ್ಚಿ ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸಬೇಕು.
ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ!
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್!!
ಭಗವದ್ಗೀತಾ, ಅಧ್ಯಾಯ 6, ಶ್ಲೋಕ 13
ಶರೀರ, ತಲೆ ಮತ್ತು ಕುತ್ತಿಗೆಯನ್ನು ನೇರವಾಗಿ ಮತ್ತು ಅಚಲವಾಗಿ ಇಟ್ಟುಕೊಂಡು , ಬೇರೆ ದಿಕ್ಕುಗಳನ್ನು ನೋಡದೆ ದೃಷ್ಟಿಯನ್ನು ಸ್ಥಿರವಾಗಿ ಮೂಗಿನ ತುದಿಯಲ್ಲಿ ನಿಲ್ಲಿಸಿರಬೇಕು)
*ಉಸಿರಾಟದ ವೇಗ ಕ್ರಮಬದ್ಧವಾಗಿದ್ದು ಪೂರ್ಣಪ್ರಾಮಾಣದಲ್ಲಿ ಶ್ವಾಸ ಒಳಗೂ, ಹೊರಗೂ ಸಂಚರಿಸಬೇಕು.
*ಆಸನಗಳನ್ನು ಸರಿಯಾಗಿ ಉಸಿರಾಟದ ಜೊತೆಜೊತೆಗೇ ಮಾಡಬೇಕು.
* ಆಸನಗಳನ್ನು ನಿಧಾನವಾಗಿಯೂ ಸಾಕಷ್ಟು ವಿಶ್ರಾಂತಿಯೊಂದಿಗೆ ಅಭ್ಯಸಿಸಬೇಕು.
*ಹೊಟ್ಟೆ ಖಾಲಿಯಾಗಿದ್ದು, ಮಲ- ಮೂತ್ರ ಖಾಲಿಯಾಗಿಸಿಕೊಂಡಿರಬೇಕು.

ಇವೇ ಮೊದಲಾದ ಕ್ರಮಗಳೊಂದಿಗೆ ಗುರುಗಳ ಮೂಲಕವೇ ಕಲಿತು ಯೋಗದಿಂದ ರೋಗಮುಕ್ತರಾಗೋಣ. ಯೋಗಾಭ್ಯಾಸ ಕೇವಲ ಯೋಗ ದಿನಕ್ಕಷ್ಟೇ ಸೀಮಿತವಾಗಿರುವುದು ಬೇಡ. ಪ್ರತಿನಿತ್ಯದ ಅಭ್ಯಾಸದಿಂದ ಮಾತ್ರ ಫಲ ದೊರಕುವುದುಯೋಗದಿಂದ ಎಲ್ಲಾ ಬಗೆಯ ರೋಗಗಳಿಂದ ಮುಕ್ತರಾಗಬಹುದು ಎಂಬ ಉತ್ಸಾಹದಿಂದ, ತಮ್ಮಷ್ಟಕ್ಕೆ ಯೋಗಾಭ್ಯಾಸ ಆರಂಭಿಸಿ, ವಿನಾಕಾರಣ ತೊಂದರೆಗಳನ್ನು ಅನುಭವಿಸಿ, ಕೊನೆಗೆ ಯೋಗದಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅಪವಾದವನ್ನು ಹೊರಿಸುವುದು ಬೇಡ!!!


🖋ಡಾ. ಪುನೀತ್ ರಾಘವೇಂದ್ರ

2 comments:

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...