Tuesday, 19 September 2017

ಭಗವದ್ಗೀತೆಯೂ "ರೋಗ ನಿರೋಧಕ ಶಕ್ತಿ"ಯನ್ನು ಬಲಗೊಳಿಸಲು ತಿಳಿಸುತ್ತಿದೆಯೇ??!! (Concept of strengthening immunity in Bhagavadgitha)



                                ದಿನಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ, ಆರೋಗ್ಯ ಮಾಸಿಕಗಳಲ್ಲಿ ಶರೀರದ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸಲು ವಿವಿಧಬಗೆಯ ಜಾಹೀರಾತುಗಳನ್ನು ನೋಡುತ್ತಿದ್ದೇವೆ. ಅದರಲ್ಲೂ ಈಗೇನಿದ್ದರೂ "ಆಂಟಿಓಕ್ಸಿಡೆಂಟ್ಸ್" ಜಮಾನ!! ಹಾಗಾದರೆ ರೋಗ ನಿರೋಧಕ ಶಕ್ತಿ/ ಇಮ್ಯೂನಿಟಿ ಎಂದರೇನು? ಶರೀರಕ್ಕೆ ಯಾವುದೇ ಬ್ಯಾಕ್ಟೀರಿಯಾ/ ವೈರಸ್ ಧಾಳಿ ಮಾಡಿದಾಗ, ಶರೀರ ಅನಾರೋಗ್ಯಕ್ಕೆ ತುತ್ತಾಗದೆ ಇರುವಂತೆ, ಆರೋಗ್ಯ ಕಾಪಾಡಿಕೊಳ್ಳಲು ಇರುವ ರಕ್ಷಣಾ ಜಾಲವೇ "ಇಮ್ಯೂನಿಟಿ" . ಇದು ದೇಶದಲ್ಲಿ "ಮಿಲಿಟ್ರಿ ಫೋರ್ಸ್" ಇದ್ದಂತೆ!! ದೇಹದಲ್ಲಿ  ಬಿಳಿ ರಕ್ತ ಕಣಗಳು (ಡಬ್ಲ್ಯೂಬಿಸಿ) ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಜೊತೆಗೆ ಲಿಂಫೋಸೈಟ್ಸ್, ಮಾಸ್ಟ್ ಸೆಲ್ಸ್ ಗಳು ಕೂಡ ಪ್ರಕ್ರಿಯೆಗೆ ಕೈಜೋಡಿಸುತ್ತವೆ. ಇಲ್ಲಿ ಎರಡು ಬಗೆಯ ರೋಗನಿರೋಧಕ ಶಕ್ತಿಗಳು.
1. ಹುಟ್ಟಿನಿಂದಲೇ ಬರುವಂಥವು
2. ಹುಟ್ಟಿದ ನಂತರ ಅಂದರೆ ಒಮ್ಮೆ ಕಾಯಿಲೆ ಬಂದ ನಂತರ ಇನ್ನೊಮ್ಮೆ ಪುನಃ ಕಾಯಿಲೆ ಬರದಂತೆ ನೋಡಿಕೊಳ್ಳುವವು (ಉದಾ: ಚಿಕನ್ ಪಾಕ್ಸ್ ಒಮ್ಮೆ ಬಂದರೆ ಸಾಮಾನ್ಯವಾಗಿ ಇನ್ನೊಮ್ಮೆ ಬರುವುದಿಲ್ಲ).
ಒಟ್ಟಿನಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ "ರೋಗ ನಿರೋಧಕ ಶಕ್ತಿ" ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿದುಕೊಂಡೆವು. ಆದರೆ ಶಕ್ತಿಯನ್ನು ಬಲಗೊಳಿಸುವುದು ಹೇಗೆ? ಸರಿಯಾದ ಆಹಾರ ಕ್ರಮ, ಕ್ರಮಬದ್ಧ ಜೀವನ ಶೈಲಿ( ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ವಿಶ್ರಾಂತಿ), ಸಾಕಷ್ಟು ನೀರು ಸೇವನೆ, ವ್ಯಾಯಾಮ ಹಾಗೂ ಮಾನಸಿಕ ಒತ್ತಡ ರಹಿತ ಜೀವನ ಕ್ರಮ....ಇದನ್ನು ಪಾಲಿಸಿದಲ್ಲಿ ಶರೀರ ರೋಗಮುಕ್ತವಾಗುವುದನ್ನು ಹೆಚ್ಚಿನವರು ಗಮನಿಸಿಕೊಂಡಿರಬಹುದು.

ಭಗವದ್ಗೀತೆ ಏನು ಹೇಳುತ್ತದೆ?

ನಿರಾಶೀರ್ಯತಚಿತ್ತಾತ್ಮಾ  ತ್ಯಕ್ತಸರ್ವಪರಿಗ್ರಹಃ |
ಶಾರೀರಂ  ಕೇವಲಂ  ಕರ್ಮ  ಕುರ್ವನ್ನಾಪ್ನೋತಿ  ಕಿಲ್ಬಿಷಂ ||
(ಭಗವದ್ಗೀತೆ, ಅಧ್ಯಾಯ 2, ಶ್ಲೋಕ 21)
ತಿಳುವಳಿಕೆಯುಳ್ಳ ಮನುಷ್ಯನು ಮನಸ್ಸು ಮತ್ತು ಬುದ್ಧಿಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಂಡು ಕರ್ಮವನ್ನು ಮಾಡುತ್ತಾನೆ. ತನಗೆ ಸೇರಿದ ಸ್ವತ್ತಿನ ವಿಷಯದಲ್ಲಿ ತಾನೇ ಒಡೆಯನೆಂಬ ಭಾವವನ್ನು ಸಂಪೂರ್ಣವಾಗಿ ಬಿಟ್ಟು ಬಿಡುತ್ತಾನೆ ಮತ್ತು ಶರೀರ ರಕ್ಷಣೆಗೆ ಬೇಕಾದಷ್ಟು ಕರ್ಮವನ್ನು ಮಾಡುತ್ತಾನೆ. ಹೀಗೆ ಕೆಲಸ ಮಾಡುವವನಿಗೆ ಪಾಪಪೂರಿತ ಪ್ರತಿಕ್ರಿಯೆಗಳು ಯಾವುದೇ ಪರಿಣಾಮವನ್ನು ಮಾಡುವುದಿಲ್ಲ.
                                     ಬುದ್ಧಿ ಮತ್ತು ಮನಸ್ಸನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟು ಕರ್ಮ ಮಾಡುವುದೆಂದರೆ ಆಲೋಚಿಸಿ ಕೆಲಸಮಾಡುವುದು. ಒಳ್ಳೆಯ ಆಹಾರ ಸೇವನೆ, ಚೆನ್ನಾಗಿ ನಿದ್ರೆ, ಕ್ರಮಬದ್ಧ ವಿಹಾರ/ ಸಂಚಾರ ( ಭಗವದ್ಗೀತೆ 6.17), ಸಾಕಷ್ಟು ನೀರು ಕುಡಿಯುವುದು, ದೈಹಿಕ ಚಟುವಟಿಕೆಯಲ್ಲಿ ತೊಡಗುವುದು ಇತ್ಯಾದಿ. ಮನಸ್ಸಿನ ನಿಯಂತ್ರಣ ಯಾಕೆಂದರೆ ಬಾಯಿಗೆ ರುಚಿಯೆಂದು ಎಲ್ಲವನ್ನೂ ತಿಂದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ!! ಹಾಗೇ ಬೀಡಿ, ತಂಬಾಕು, ಮದ್ಯಪಾನ ಮಾಡದೇ ಇರಲು ನಮ್ಮ ಮನಸ್ಸೇ ಮುಖ್ಯ. ಯಾವುದೇ ಔಷಧಗಳಿಂದ ಅದು ಸಾಧ್ಯವಿಲ್ಲ. ನಾನು, ನನ್ನದು ಎಂದು ಕೆಲಸ ಮಾಡಿದಾಗ ಬರುವ ಮಾನಸಿಕ ಒತ್ತಡವೇ "ಸ್ಟ್ರೆಸ್". ಇದರಿಂದ ಶರೀರದ "ಕಾರ್ಟಿಸೋಲ್" ಹಾರ್ಮೋನ್ ಅತಿಯಾದಂತೆ, ದೇಹದಲ್ಲಿ ಪ್ರಮುಖವಾಗಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಜೊತೆಗೆ ಸಕ್ಕರೆಯ ಅಂಶ, ಕೊಬ್ಬಿನ ಅಂಶ, ರಕ್ತದೊತ್ತಡವೂ ಏರುಪೇರಾಗುತ್ತದೆ. (ಹೆಚ್ಚಿನ ಮಾಹಿತಿಗೆ "ಮಧುಮೇಹಕ್ಕೆ ಕಾರಣ ಮಧುಮೋಹವಲ್ಲ!! ಮನದೊಳಗಿನ ವ್ಯಾಮೋಹ!! ಲೇಖನ ಓದಿ.) ಇನ್ನು ಶರೀರ ರಕ್ಷಣೆಗೆ ಬೇಕಾದ ಕರ್ಮಗಳೆಂದರೆ ಮೇಲೆ ತಿಳಿಸಿದವುಗಳೇ ಅಲ್ಲವೇ??!!
                             ಈ ರೀತಿಯಾಗಿ ಸೂಕ್ತವಾದ ಜೀವನಶೈಲಿ, ಆಹಾರಕ್ರಮ ಅಳವಡಿಸಿಕೊಂಡಾಗ ಶರೀರದಲ್ಲಿ ಯಾವುದೇ ಕಾಯಿಲೆಗಳು ಕಾಣಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಹಾಗಾಗಿ " ಶರೀರದ 'ರೋಗ ನಿರೋಧಕ ಶಕ್ತಿ' ಬಲಗೊಂಡರೆ ಯಾವುದೇ ಕಾಯಿಲೆಗಳು ಬರುವುದಿಲ್ಲ!!" ಎಂಬುದನ್ನೇ ಅಲ್ಲವೇ ಭಗವದ್ಗೀತೆಯು ತಿಳಿಸುತ್ತಿರುವುದು??!! ಯೋಚಿಸಿ......
 (Concept of strengthening immunity in Bhagavadgitha)

  • ಡಾ.ಪುನೀತ್ ರಾಘವೇಂದ್ರ ಕುಂಟುಕಾಡು BNYS, MD Yoga Clinical 

No comments:

Post a Comment

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...