Sunday, 20 August 2017

ಅತಿ ನಿದ್ರೆ ಅಪಾಯಕಾರಿ!!


               "ಡಾಕ್ಟ್ರೇ... ನಿಮ್ಮ ಬರಹ "ನಿದ್ರೆ ಮಾಡಿ; ನಿರೋಗಿಯಾಗಿ!!" ಓದಿದೆ.... ನಾನಂತೂ ಸಾಕಷ್ಟು ನಿದ್ದೆ ಮಾಡ್ತೇನೆ. ರಾತ್ರಿ ಸರಿಯಾಗಿ 10 ಘಂಟೆಗೆ ಮಲಗಿ  ಬೆಳಗ್ಗೆ 7 ಘಂಟೆಗೆಲ್ಲಾ  ಏಳ್ತೇನೆ. ಸಂಡೆ ಬಂದ್ರೆ ಮಾತ್ರ 8 ಘಂಟೆಗೆ!! ಹಾಗೇ  ಮಧ್ಯಾಹ್ನ ಊಟ ಮಾಡಿ ಒಂದು ಘಂಟೆ ಸ್ವಲ್ಪ ನಿದ್ರೆ ಮಾಡುವುದೂ ಇದೆ. ಪುರ್ಸೊತ್ತಿದ್ದಾಗ…. ನಿರೋಗಿಯಾಗ್ಲಿಕ್ಕೆ ಇಷ್ಟು ನಿದ್ರೆ ಸಾಕಲ್ಲ?".... ಅದಕ್ಕೆ ನಾನಂದೆ "ನಿರೋಗಿಯಲ್ಲ... ರೋಗಿಯಾಗ್ಲಿಕ್ಕೆ ಧಾರಾಳವಾಗಿ ಸಾಕು!!"... ಹೌದು ಫ್ರೆಂಡ್ಸ್... ಅತಿಯಾಗಿ ನಿದ್ರೆ ಮಾಡುವುದೂ ಅನಾರೋಗ್ಯಕ್ಕೆ ಒಂದು ಮೂಲ ಕಾರಣಹೇಗೆ? ಮುಂದೆ  ಓದಿ...

ಅತಿನಿದ್ರೆಗೆ ಕಾರಣಗಳು:
*ಮಾನಸಿಕ ಖಿನ್ನತೆ ( ಡಿಪ್ರೆಶನ್)
*ಅತಿಯಾನ ಮಾನಸಿಕ ಒತ್ತಡ
*ಕೆಲವು ಬಗೆಯ ಔಷಧಗಳು
*ಥೈರಾಯಿಡ್ ಹಾರ್ಮೋನ್ ಕಡಿಮೆಯಾದಾಗ ( ಹೈಪೋಥೈರಾಯಿಡಿಸಮ್)
*ವಿಚ್ಛಿದ್ರ ನಿದ್ರೆ ( ನಾರ್ಕೋಲೆಪ್ಸಿ)

ಅತಿ ನಿದ್ರೆಯಿಂದ ಬರುವ ಸಮಸ್ಯೆಗಳು:
ನಾತ್ಯಶ್ನತಸ್ತು ಯೋಗೋಃಸ್ತಿ ಚೈಕಾನ್ತಮನಶ್ನತಃ
ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ!!  (ಭಗವದ್ಗೀತೆ, ಅಧ್ಯಾಯ 6, ಶ್ಲೋಕ 16)
           ಹೇ ಅರ್ಜುನ, ಯಾರು ಅತಿ ಹೆಚ್ಚಾಗಿ ತಿನ್ನುತ್ತಾರೋ ಅಥವಾ ತಿನ್ನುವುದೇ ಇಲ್ಲವೋ, ಯಾರು ಅತಿಯಾಗಿ ನಿದ್ರೆ ಮಾಡುತ್ತಾರೋ ಅಥವಾ ಅತಿಯಾಗಿ ಜಾಗರಣೆ ( ನಿದ್ರೆ ಕೆಡುವುದು) ಮಾಡುತ್ತಾರೋ ಅವರು ಯೋಗಿಯಾಗಲು ಸಾಧ್ಯವಿಲ್ಲ.
ಯೋಗಿ ಎಂದರೆ ಆರೋಗ್ಯವಂತ ಎಂದರ್ಥ. ನಿರೋಗಿಯಾದರೆ ಮಾತ್ರ ಆತ ನಿಜವಾದ ಯೋಗಿ. ಆರೋಗ್ಯ ಸರಿ ಇದ್ದರೆ ತಾನೆ ಸಾಧನೆ ಸಾಧ್ಯವಾಗುವುದು??!!

            ಅತಿಯಾಗಿ ನಿದ್ರೆ ಮಾಡಿದಾಗ ಶರೀರದ ದೈಹಿಕ ಚಟುವಟಿಕೆಗಳಿಗೆ ಬೇಕಾಗುವ ಸಕ್ಕರೆಯ ಅಂಶ ಶರೀರದಲ್ಲೆ ಉಳಿದು ಶರೀರದ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಅದೇ ಡಯಾಬಿಟಿಸ್!! ಕೊಬ್ಬಿನ ಅಂಶವೂ ಕರಗುವುದಿಲ್ಲ. ಬಲೂನಿಗೆ ಗಾಳಿ ಊದಿದಾಗ, ಗಾಳಿ ಹೊರ ಹೋಗದೆ ಒಳಗೇ ಉಳಿದರಲ್ಲವೇ ಬಲೂನು ಊದುವುದು. ಹಾಗೆ ಶರೀರವೂ ಊದುವುದು. ಅದೇ ಒಬೇಸಿಟೀ.. ಸ್ಥೂಲಕಾಯ!! ಶರೀರ ತೂಕ ಜಾಸ್ತಿ ಆದರೆ ಮೊಣಕಾಲು ಅಷ್ಟು ಭಾರವನ್ನು ತಡೆಯುವುದೇ? ಅದೇ ಮಂಡಿ ಸವೆತ!! ರಕ್ತದಲ್ಲಿರುವ ಕೊಬ್ಬಿನ ಅಂಶ ಹೊರಗೆ ಹೋಗದಿದ್ದರೆ ಮಾಡುವುದಾದರೂ ಏನು? ಅಲ್ಲೇ ಕುಳಿತು ರಕ್ತನಾಳಗಳಲ್ಲಿನ ರಕ್ತದ ಚಲನೆಯನ್ನು ತಡೆಹಿಡಿಯುತ್ತಿರುತ್ತದೆ. ಆಗ ರಕ್ತದೊತ್ತಡ ಜಾಸ್ತಿಯಾಗುತ್ತದೆ. ಅದೇ ಹೈಪರ್ ಟೆನ್ಷನ್!! ಒಂದು ಪೈಪಿನಲ್ಲಿ ಬರುವ ನೀರು 10 ಮನೆಗಳಿಗೆ ಸಾಕಾಗದ್ದಿದ್ದಲ್ಲಿ ಜಗಳಗಳಾಗಿ ಒಬ್ಬರ ಜೊತೆ ಒಬ್ಬರ ಮಾತು "ಫುಲ್ ಸ್ಟಾಪ್" ಹಾಗೇ.. ರಕ್ತನಾಳಗಳಲ್ಲಿ ರಕ್ತ ಹರಿಯುವುದು ಕಡಿಮೆಯಾದಾಗ ಅಲ್ಲೂ "ಜಗಳಗಳು" ... ಅದೇ ಹಾರ್ಟ್ ಆಟ್ಯಾಕ್!! ನಂತರದ ಫುಲ್ ಸ್ಟಾಪ್ ನಿಮ್ಗೆಲ್ಲಾ ಗೊತ್ತೇ ಇದೆ..ಸಾಕಲ್ವೇ?? (ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ ಅತಿಯಾಗಿ ನಿದ್ದೆ ಮಾಡುವುದು ಮಾನಸಿಕ ಖಿನ್ನತೆ, ಸಂತಾನ ಹೀನತೆ, ಮುಟ್ಟಿನ ಸಮಸ್ಯೆ, ಮೂಳೆ ಸವೆತ ಇವುಗಳಿಗೂ ಕಾರಣವಾಗಬಹುದು!!)

ಮಧ್ಯಾಹ್ನ ಯಾಕೆ ನಿದ್ರೆ ಮಾಡಬಾರದು?

            ಶರೀರ ಚಟುವಟಿಕೆಯಿಂದಿದ್ದಾಗ "ಕ್ಯಾಲೋರಿ"( ಅಂದರೆ ಸಕ್ಕರೆಯ ಅಂಶ ಕರಗಿದಾಗ ಶರೀರಕ್ಕೆ ದೊರಕುವ ಶಕ್ತಿಯ ಪ್ರಮಾಣ) ಬಳಕೆಯಾಗುವುದು ಜಾಸ್ತಿಒಂದು ತಾಸು ನಿಂತುಕೊಳ್ಳಲು ಬೇಕಾದಷ್ಟು ಕ್ಯಾಲೋರಿ ಕುಳಿತುಕೊಳ್ಳವುದಕ್ಕೆ ಬೇಕಾಗುವುದಿಲ್ಲ. ಮಲಗಿದ್ದಾಗ ಅದು ತೀರಾ ನಗಣ್ಯ!! ( ವ್ಯಕ್ತಿಯ ತೂಕ, ಎತ್ತರ, ವಯಸ್ಸು, ಆಹಾರ, ಪ್ರಕೃತಿಗೆ ಅನುಗುಣವಾಗಿ ಕ್ಯಾಲೋರಿ ಬಳಕೆ ಬದಲಾಗುತ್ತಿರುತ್ತದೆ. ಹಾಗಾಗಿ ಇಲ್ಲಿ ಕುಳಿತಾಗ, ನಿಂತುಕೊಂಡಾಗ, ಮಲಗಿದ್ದಾಗ ಎಷ್ಟೆಷ್ಟು ಬಳಕೆಯಾಗುತ್ತದೆ ಎಂಬ ಪ್ರಮಾಣವನ್ನು ನೀಡಿಲ್ಲ). ಹಾಗಾಗಿ ಮಧ್ಯಾಹ್ನವೂ ಮಲಗಿದ್ದಾಗ ಶರೀರ ಶಕ್ತಿಗೋಸ್ಕರ ಬಳಸುವ ಸಕ್ಕರೆಯ ಅಂಶ ಕಡಿಮೆ. ಶರೀರದಲ್ಲಿ ಸಕ್ಕರೆಯ, ಕೊಬ್ಬಿನ ಅಂಶ ಹೆಚ್ಚಲು  ಮಧ್ಯಾಹ್ನದ ನಿದ್ದೆಯೂ  ಕಾರಣವಾಗಬಲ್ಲದು!! ಎಚ್ಚರ...
  • ಡಾ.ಪುನೀತ್ ರಾಘವೇಂದ್ರ BNYS, MD Yoga Clinical 


No comments:

Post a Comment

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...