Friday, 18 August 2017

ನಿದ್ರೆ ಮಾಡಿ; ನಿರೋಗಿಯಾಗಿ!!



               ನಿದ್ರೆ ಎನ್ನುವುದು ಪ್ರತೀ ಜೀವಜಂತುಗಳಿಗೆ ಅತೀ ಅಗತ್ಯ. ಸಸ್ಯಗಳೂ ಕೂಡ ನಿದ್ರೆ ಮಾಡುತ್ತವೆ. ನಿದ್ರೆಯನ್ನು ಸುಲಭವಾಗಿ ಅರ್ಥೈಸಿಕೊಳ್ಳುವುದೆಂದರೆ ವಿಶ್ರಾಂತಿ!! ಹಾಗಾದರೆ ನಿದ್ರೆ ಎಂದರೆ ಏನು
"
ಅಭಾವಪ್ರತ್ಯಯಾಲಂಭನಾ ತಮೋ ವೃತ್ತಿ ನಿದ್ರಾ!!" (ಪತಂಜಲಿ ಯೋಗ ಸೂತ್ರ 1.10)
ನಮ್ಮ ಮನಸ್ಸು ಯೋಚನೆಗಳ ಮೇಲೆ ಅವಲಂಭನೆಗೊಳ್ಳುವುದಕ್ಕೆ ಕೊರತೆ ಮೂಡಿಸುವ/ ಅಭಾವ ಉಂಟುಮಾಡುವ ತಾಮಸ ವೃತ್ತಿಯೇ ನಿದ್ರೆ. (ಉದಾ: ಮನಸ್ಸಿಗೆ ಆಫೀಸ್ ಕೆಲಸ ಟೆನ್ಷನ್ ಉಂಟುಮಾಡಿರುತ್ತದೆ. ಆದರೆ ನಿದ್ರಿಸಿ ಎದ್ದಾಗ ಅದೇ ಯೋಚನೆ/ಒತ್ತಡ ಇರುವುದಿಲ್ಲ!!)

ಸುಖದ ಮೂಲವೇ ನಿದ್ರೆ
ಯದಗ್ರೇ ಚಾನುಬನ್ಧೇ ಸುಖಂ ಮೋಹನಮಾತ್ಮನಃ
ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಮ್!!
(
ಭಗವದ್ಗೀತೆ , ಅಧ್ಯಾಯ 18, ಶ್ಲೋಕ 39)
ಯಾವುದು ಆರಂಭದಲ್ಲಿಯೂ ಅಂತ್ಯದಲ್ಲಿಯೂ ಸುಖವನ್ನೇ ಉಂಟುಮಾಡುವುದೋ ಅದೇ ನಿದ್ರೆ, ಆಲಸ್ಯ, ಭ್ರಮೆಗಳು ತಾಮಸ ಪ್ರಕೃತಿಗೆ ಉದಾಹರಣೆಗಳಾಗಿವೆ. ಅಂದರೆ ನಾವು ಎಷ್ಟೇ ಕೋಟಿಗಟ್ಟಲೆ ದುಡ್ಡು ಸಂಪಾದಿಸಿದರೂ, ಎಲ್ಲಾ ಬಗೆಯ ಸುಖ ಹೊಂದಿದ್ದೇನೆ ಎನ್ನಲು ನಿದ್ರೆಯನ್ನು ಅನುಭವಿಸಲೇಬೇಕು. (ಸುಖ ಅಂದರೆ ಏನು ಎಂದು ತಿಳಿಯಲು 2 ದಿನ ನಿದ್ರೆ ಬಿಟ್ಟು ನೋಡಿ. ಅಂದರೆ ಮಾತ್ರ ಅದು ಅನುಭವಕ್ಕೆ ಬರುವುದು!!)

ಇತರೆ ಉಪಯೋಗಗಳು
ನಿದ್ರಾಯತ್ತಂ ಸುಖಂ ದುಃಖಂ ಪುಷ್ಟಿಃ ಕಾರ್ಶ್ಯಂ ಬಲಾಬಲಮ್
ವೃಷತಾ ಕ್ಲೀಬತಾ ಜ್ಞಾನಮಜ್ಞಾನಂ ಜೀವಿತಂ !!
(
ಚರಕ ಸಂಹಿತಾ, ಸೂತ್ರಸ್ಥಾನ 21/36)
ಸುಖ,ದುಃಖ, ಪೋಷಣೆ, ಕ್ಷೀಣತೆ, ಬಲ, ದೌರ್ಬಲ್ಯ, ಪುರುಷತ್ವ, ನಿರ್ವೀಯತ್ವ, ಬುದ್ಧಿ ಶಕ್ತಿ, ಅಜ್ಞಾನ, ಜೀವನ ಮತ್ತು ಸಾವು ಇವುಗಳೆಲ್ಲವೂ ನಿದ್ರೆಯ ಅಧೀನತೆಯಲ್ಲಿದೆ. ಅಂದರೆ ಚೆನ್ನಾಗಿ ನಿದ್ರೆ ಮಾಡಿದಲ್ಲಿ ಎಲ್ಲಾ ಸುಖ ವಿಷಯಗಳು(ಪೋಷಣೆ, ಪುರುಷತ್ವ, ಬಲ) ದೊರೆಯುತ್ತದೆ. ಇಲ್ಲವಾದಲ್ಲಿ ದುಃಖ ವಿಷಯಗಳು ( ಕ್ಷೀಣತೆ, ದೌರ್ಬಲ್ಯ, ನಿರ್ವೀರ್ಯತ್ವ) ಕಾಣಿಸಿಕೊಳ್ಳುತ್ತವೆ.

ಸಮಯಕ್ಕೆ ಸರಿಯಾದ ನಿದ್ರೆ ಅತೀ ಅಗತ್ಯ!!
              ರಾತ್ರಿಯ ಹೊತ್ತು ಸುಮಾರು 6 ರಿಂದ 8 ಘಂಟೆಗಳ ಅವಧಿಯ ನಿದ್ರೆ ಶರೀರಕ್ಕೆ ಅತೀ ಅವಶ್ಯ. ರಾತ್ರಿಯೇ ಏಕೆ? ಸಮಯದಲ್ಲಿ ಶರೀರದ ಬೆಳವಣಿಗೆಗೆ ಬೇಕಾದ "ಗ್ರೋಥ್ ಹಾರ್ಮೋನ್" ಗಳು ಸೂಕ್ತ ರೀತಿಯಲ್ಲಿ ಉತ್ಪತ್ತಿಯಾಗುತ್ತವೆ. ಜೊತೆಗೆ "ಮೆಲಟೋನಿನ್" ಎಂಬ ಕೇವಲ ಕತ್ತಲಿನಲ್ಲಿ ಮಾತ್ರ ಉತ್ಪತ್ತಿಯಗುವ ಹಾರ್ಮೋನ್. ಆದರೆ  "ಕಾರ್ಟಿಸೋಲ್" ಎಂಬ ಅತೀ ಮುಖ್ಯ  ಇನ್ನೊಂದು ಹಾರ್ಮೋನ್, ಇದು ಹಗಲಿನ ಹೊತ್ತು ಶರೀರದಲ್ಲಿ ಜಾಸ್ತಿ ಉತ್ಪತ್ತಿಯಾಗಿ ರಾತ್ರಿ ಹೊತ್ತು ಸಾಕಷ್ಟು ಕಡಿಮೆ ಪ್ರಮಾಣಕ್ಕೆ ತಲುಪುತ್ತದೆ. ಇದನ್ನು  "ಸ್ಟ್ರೆಸ್ಸ್ ಹಾರ್ಮೋನ್" ಅಂತಲೂ ಕರೆಯುತ್ತಾರೆ. ಮನುಷ್ಯ ಒತ್ತಡಕ್ಕೆ ಒಳಗಾದಾಗ ಇದರ ಉತ್ಪತ್ತಿ ಇನ್ನೂ ಜಾಸ್ತಿ!! ರಾತ್ರಿಯ ಹೊತ್ತು ಎಚ್ಚರದಿಂದಿದ್ದರೆ ಶರೀರ ಹೆಚ್ಚು ಹೆಚ್ಚು "ಕಾರ್ಟಿಸೋಲ್" ದೇಹಕ್ಕೆ ಸೇರಿಸುತ್ತಿರುತ್ತದೆ. "ಗ್ಲುಕೋಕಾರ್ಟಿಕೊಯಿಡ್" ಆದ ಸ್ಟೀರಾಯಿಡ್ ಶರೀರದ ಸಕ್ಕರೆಯ ಅಂಶ ಹೆಚ್ಚುಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದುವೇ ಮಧುಮೇಹ ಕಾಣಿಸಿಕೊಳ್ಳಲು ಕಾರಣವಾಗುತ್ತದೆ!! ಜೊತೆಗೆ ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸುವುದು, ಹೃದಯ ಸಂಬಂಧೀ ಸಮಸ್ಯೆಗಳಿಗೂ ಕಾರಣವಾಗುವುದು. ರಾತ್ರಿ ನಿದ್ದೆ ಮಾಡಿದಾಗ ಉತ್ಪತ್ತಿಯಾಗುವ "ಮೆಲಟೋನಿನ್" "ಕಾರ್ಟಿಸೋಲ್" ಅಡ್ಡ ಪರಿಣಾಮಗಳನ್ನು ಸಾಕಷ್ಟು ಕಡಿಮೆ ಮಾಡುವುದು. ಇದರಿಂದ ಆರೋಗ್ಯ ಉತ್ತಮಗೊಂಡು, ನಾವು ಖಾಯಿಲೆಗಳಿಂದ ದೂರವಿರಬಹುದು. ಹಾಗೆಂದು ಜಾಸ್ತಿ ನಿದ್ರೆ ಮಾಡುವುದೂ ಒಳ್ಳೆಯದಲ್ಲ!! ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ 4.5 ಘಂಟೆಗಳಿಗಿಂತ ಕಡಿಮೆ ನಿದ್ದೆ ಹಾಗೂ 8.5 ಘಂಟೆಗಳಿಗಿಂತ ಜಾಸ್ತಿ ನಿದ್ದೆ ಮಾಡಿರುವವರ BMI & HbA1c ಪ್ರಮಾಣ ಅಧಿಕವಾಗಿರುವುದು ಕಂಡುಬಂದಿದ್ದು ಇದು ಅನಾರೋಗ್ಯದ ಸೂಚಕವಾಗಿದೆ

ಡಾ.ಪುನೀತ್ ರಾಘವೇಂದ್ರ BNYS, MD Yoga Clinical 

1 comment:

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...