Monday, 19 June 2017

ನಾವೇಕೆ " ಯೋಗಾಭ್ಯಾಸ" ಮಾಡಬೇಕು?



ನಾವೇಕೆ " ಯೋಗಾಭ್ಯಾಸ" ಮಾಡಬೇಕು?

"ಡಾಕ್ಟ್ರೇ... ನಾನು ಪ್ರತಿನಿತ್ಯ ಮುಂಜಾನೆ 5ಕ್ಕೇ ಏಳ್ತೀನಿ. ಎದ್ದು ಅರ್ಧ ಘಂಟೆ ವಾಕಿಂಗ್ ಹೋಗ್ತೀನಿ. ಸಮಯವಿದ್ರೆ ಕೆಲವೊಂದಿನ ಸಾಯಂಕಾಲನೂ ವಾಕಿಂಗ್ ಹೋಗೋದಿದೆ. ಜೊತೆಗೆ ಮನೆಲೇ ಗುಡ್ಸೋದು, ಒರ್ಸೋದು, ಪಾತ್ರೆ ತೊಳೆಯೋದೂ ನಾನೇ. ಹಂಗಾಗಿ ಸಾಕಷ್ಟು ದೈಹಿಕ ಚಟುವಟಿಕೇನೂ ನಡೆಯುತ್ತೆ. ಸೋ.. ನಾನ್ಯಾಕೆ ಯೋಗಾಸನ, ಪ್ರಾಣಾಯಾಮದ ಅಭ್ಯಾಸ ಮಾಡ್ಬೇಕು??" ಇದು ನನ್ನನ್ನು ಭೇಟಿಯಾಗೋ ಹೆಚ್ಚಿನ ಜನರು ಕೇಳೋ ಸಾಮಾನ್ಯ ಪ್ರಶ್ನೆ. ಸರಿ... ಇಷ್ಟೆಲ್ಲಾ ಮಾಡಿರೋದು ದೈಹಿಕ ಚಟುವಟಿಕೆಗೇನೋ ಸ್ವಲ್ಪ ಸಾಕು. ಆದರೆ ಮನಸ್ಸಿಗೆ? ಮನಸ್ಸಿನಿಂದಲೇ ದೇಹ ಮುಂದುವರೆಯೋದಲ್ಲವೇ? "ಮನಃ ಪ್ರಶಮನೋಪಾಯ ಯೋಗಃ ಇತ್ಯಭಿಧೀಯತೇ" ( ಯೋಗ ವಾಸಿಷ್ಠ) ಅಂದರೆ ಮನಸ್ಸನ್ನು ವಿಶ್ರಾಂತ/ ಪ್ರಶಾಂತಗೊಳಿಸಲು ಇರುವ ಉಪಾಯ/ ಸಾಧನವೇ ಯೋಗ.

ಯುಕ್ತಾಹಾರ ವಿಹಾರಸ್ಯ ಯುಕ್ತ ಚೇಷ್ಠಸ್ಯ ಕರ್ಮಸು !
ಯುಕ್ತ ಸ್ವಪ್ನಾವ ಬೋಧಸ್ಯ ಯೋಗೋ ಭವತಿ ದುಃಖಃ !! 
( ಭಗವದ್ಗೀತಾ, ಅಧ್ಯಾಯ 6. 17)
 ಕ್ರಮಬದ್ಧವಾದ ಆಹಾರ ಮತ್ತು ವಿಹಾರ/ ಪ್ರಯಾಣ , ಒಳ್ಳೆಯ ರೀತಿಯ ಚೇಷ್ಠೆ/ವಿನೋದ ಹಾಗೂ ಕೆಲಸಕಾರ್ಯಗಳು, ಸಮಪ್ರಮಾಣದ ನಿದ್ದೆ ಮತ್ತು ಎಚ್ಚರದಿಂದಿರುವಿಕೆ ಇವುಗಳನ್ನು ಹೊಂದಿದ್ದಾಗ ಯೋಗವು ದುಃಖಗಳನ್ನು ನಾಶಮಾಡುವುದು.

ಕೇವಲ ವಾಕಿಂಗ್/ಜಾಗಿಂಗ್ ಮಾಡುವುದು ಮಾತ್ರವಲ್ಲ ಹೊತ್ತಿಗೆ ಸರಿಯಾಗಿ ಊಟ/ತಿಂಡಿಗಳನ್ನೂ ಸೇವಿಸಬೇಕು. ಇಲ್ಲವಾದಲ್ಲಿ ಅಸಿಡಿಟಿ,ಅಜೀರ್ಣದ ತೊಂದರೆಗಳು ಕಾಣಿಸಿಕೊಳ್ಳುವುದು. ಪ್ರತಿನಿತ್ಯ ಗಂಟೆಗಟ್ಟಲೆ ಪ್ರಯಾಣ ಕಡಿಮೆಗೊಳಿಸುವುದು. ತಪ್ಪಿದಲ್ಲಿ ಬೆನ್ನುನೋವು, ಸೊಂಟನೋವು ಖಚಿತ!!! ಹಾಗೆಯೇ ನಮ್ಮ ವಿನೋದ/ ಕೆಲಸ ಕಾರ್ಯಗಳು ಸಾಕಷ್ಟು ಒತ್ತಡ ಮುಕ್ತವಾಗಿರಬೇಕು. ಒತ್ತಡಕ್ಕೆ ನಾವು ಕೊಟ್ಟ ಹೆಸರು  “STRESS”.. ಇದರ ದುಷ್ಪರಿಣಾಮಗಳು ನಿಮಗೆಲ್ಲಾ ತಿಳಿದೇ ಇದೆ ಅಲ್ಲವೇ!!!?? ಕಡಿಮೆ ನಿದ್ದೆ ಮತ್ತು ಅತಿಯಾಗಿ  ಎಚ್ಚರದಿಂದಿರುವುದು ಎಲ್ಲಾ ರೀತಿಯ ಹಾರ್ಮೋನ್ ಗಳ ಸಮಸ್ಯೆಗಳಿಗೆ ಮೂಲ ಕಾರಣ. ಆದರೆ ನಾವು ಯಾವಾಗ ಯೋಗಾಭ್ಯಾಸವನ್ನು ಆರಂಭಿಸುತ್ತೇವೋ ಈ ಎಲ್ಲಾ ವಿಷಯಗಳನ್ನು ಸರಿಪಡಿಸಿಕೊಳ್ಳಬಹುದು. ದೈಹಿಕ/ ಮಾನಸಿಕ ದುಃಖಗಳನ್ನೂ ದೂರಮಾಡಿಕೊಳ್ಳಬಹುದು.
ಹಠಸ್ಯ ಪ್ರಥಮಾಂಗತ್ವಾತ್ ಆಸನಂ ಪೂರ್ವಮುಚ್ಯತೇ!
ಕುರ್ಯಾತ್ತಾಸನಮ್ ಸ್ಥೈರ್ಯಂ ಆರೋಗ್ಯಂ ಚ ಅಂಗಲಾಘವಮ್!!
(ಹಠಯೋಗ ಪ್ರದೀಪಿಕಾ, ಅಧ್ಯಾಯ 1, 17)
ಹಠವಿದ್ಯೆಯಲ್ಲಿ ಪ್ರಥಮವಾಗಿ ಆಸನದ ಅಭ್ಯಾಸವನ್ನು ಆರಂಭಿಸಬೇಕು. ಆಸನವನ್ನು ಅಭ್ಯಸಿಸಿದಾಗ ಸ್ಥೈರ್ಯ, ಆರೋಗ್ಯ ಹಾಗೂ ಶರೀರದ ಜಡತ್ವ ದೂರವಾಗುವುದು ಅಂದರೆ ದೇಹ ಹಗುರವಾಗುವುದು.
ಈವಾಗ ನೀವೇ ಹೇಳಿ... ಕೇವಲ ವಾಕಿಂಗ್/ಜಾಗಿಂಗ್ ಮಾತ್ರ ಸಾಕೆ? ಯೋಗಾಭ್ಯಾಸವನ್ನೂ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆ? ಯೋಗಾಭ್ಯಾಸ  ಪ್ರತಿನಿತ್ಯ ಮಾಡುವುದು ಉತ್ತಮ. ಕೇವಲ "ಜೂನ್ 21"ಕ್ಕೆ ಮಾತ್ರ ಸೀಮಿತವಾಗದಿರಲಿ.



  • ಡಾ.ಪುನೀತ್ ರಾಘವೇಂದ್ರ ಕುಂಟುಕಾಡು BNYS,MD Yoga Clinical

Saturday, 17 June 2017

ಯೋಗ್ಯ ಯೋಗ; ಆಗದಿರಲಿ ಅಯೋಗ್ಯ!!!



                                  "ಡಾಕ್ಟ್ರೇ... ಕಳ್ದ ವರ್ಷ ಬಿ.ಪಿ.,ಶುಗರ್ ಅದರ ಮೇಲೆ ಒಂದಷ್ಟು ಕೊಲೆಸ್ಟ್ರಾಲ್ ನನ್ನ ಸ್ವಯಾರ್ಜಿತ ಆಸ್ತಿಗಳಾದ್ವು. ಫಿಜಿಶಿಯನ್ಗೆ ತೋರುಸ್ದಾಗ ತಲೆಯಿಂದ ಕಾಲು ಬುಡದವರೆಗೆ ದಿಟ್ಟಿಸಿ ನೋಡಿ ನಿಮ್ಮ್ ಮೈಯಲ್ಲಿ ಕೊಬ್ಬು ಒಂದು ವರ್ಷಕ್ಕಾಗೋವಷ್ಟಾಗಿದೆ. ಡಯಟ್, ಯೋಗ ಆರಂಭಿಸಿ ಅಂದ್ರು. ಒಂದಷ್ಟು ಯೋಗ ಪುಸ್ತಕಗಳು, ಹಂಗೇ ಟಿ.ವಿ. ನೋಡ್ತಾ ಯೋಗಾಭ್ಯಾಸ ಶುರು ಮಾಡ್ದೆ. ಆದ್ರೂ ಬಿ.ಪಿ., ಶುಗರ್ ಬ್ಯಾಂಕ್ ಬಡ್ಡಿ ತರ ಏರ್ತಾ ಇದೆ. ಏನ್ ಮಾಡ್ಲಿ?" ಎಂದಿದಕ್ಕೆನಾನು ನೀವು ಮಾಡೋ ಅಭ್ಯಾಸ ಮಾಡ್ ತೋರ್ಸಿ ಅಂದೆ. ಹಂಗೇ ಕೂತ್ಕೊಂಡ್ಬಿಟ್ಟು ಕಪಾಲಭಾತಿ ಮಾಡಿದ್ರು. ಶ್ವಾಸ ಬಿಡೋ ವೇಗಕ್ಕೆ ನನ್ ಕ್ಲಿನಿಕ್ ನ ಕ್ಯಾಲೆಂಡರ್ ಕಿಟಕಿಯಿಂದ ಹಾರಿ ಬಾಲ್ಕನಿಗೆ ಬಿತ್ತು!!! ನೋಡುದ್ರೆ ನಮ್ ಸಾಹೇಬ್ರು ಶಿರಾಡಿ ಘಾಟಿಲಿ ಏರಿಬರೋ ಗ್ಯಾಸ್ ಟ್ಯಾಂಕರ್ ತರ ಏದುಸ್ರು ಬಿಡ್ತಿದ್ದಾರೆ!!ಇದೆಲ್ಲ ತಮ್ಮಷ್ಟಕ್ಕೆ ಯೋಗಾಭ್ಯಾಸ ಆರಂಭಿಸಿರೋ ಪರಿಣಾಮ. ಇದು ರೋಗ ಕಡಿಮೆ ಮಾಡೋ ಬದ್ಲು ಅನಾರೋಗ್ಯಕ್ಕೆ ಮೂಲ.
                        ಹೌದು ಫ್ರೆಂಡ್ಸ್... ಇಂದು ಯೋಗ ಅಭ್ಯಾಸ ಫ್ಯಾಶನ್ ಆಗಿ ಬದಲಾಗುತ್ತಿದೆ. ಅದರಲ್ಲೂ ಜೂನ್ 21ಕ್ಕೆ "ವಿಶ್ವ ಯೋಗ ದಿನ" ಬಂದ ಮೇಲಂತೂ ಯೋಗದ ಕ್ರೇಜ್ಃ ಮೂರು ಪಟ್ಟು ಹೆಚ್ಚಾಗಿದೆ. ಗಲ್ಲಿ ಗಲ್ಲಿಗೊಂದು ಯೋಗ ತರಗತಿಗಳೂ ತಲೆಯೆತ್ತುತ್ತಿವೆ. ಸಮಾಜದ ಸ್ವಾಸ್ಥ್ಯಕ್ಕೆ ಇದೊಂದು ಉತ್ತಮಕರ ಬೆಳವಣಿಗೆಯೂ ಹೌದು. ಆದರೆ ಯಾವುದೇ ಗುರುಗಳ ಮೂಲಕ ಕಲಿಯದೇ, ತಮ್ಮಷ್ಟಕ್ಕೆ ಕೇವಲ ಟಿ.ವಿ. , ಯೂಟ್ಯೂಬ್ ಮುಂತಾದ ವೀಡಿಯೋ ಅಥವಾ ಪುಸ್ತಕಗಳ ಮೂಲಕ ಕಲಿತು ಮಾಡುವ ಆಸನ, ಪ್ರಾಣಾಯಾಮಗಳ ಅಭ್ಯಾಸ ಒಳ್ಳೆಯದಲ್ಲ.

"ಪ್ರಾಣಾಯಾಮೇನ ಯುಕ್ತೇನ ಸರ್ವರೋಗ ಕ್ಷಯೋ ಭವೇತ್!
ಅಯುಕ್ತಾಭ್ಯಾಸ ಯೋಗೇನ ಸರ್ವರೋಗ ಸಮುದ್ಭವಃ!!"
(ಹಠಯೋಗ ಪ್ರದೀಪಿಕಾ, ಅಧ್ಯಾಯ 2, ಶ್ಲೋಕ 16)
ಪ್ರಾಣಾಯಾಮವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಿದಲ್ಲಿ ಸರ್ವರೋಗಗಳೂ ಗುಣವಾಗುವುದು. ತಪ್ಪಾದ ರೀತಿಯಲ್ಲಿ ಯೋಗವನ್ನು ಅಭ್ಯಾಸ ಮಾಡಿದರೆ ಸರ್ವ ರೋಗಗಳೂ ಉಲ್ಭಣಗೊಳ್ಳುವುದು.

ಕ್ರಮಬದ್ಧವಾಗಿ ಎಂದರೇನು?
*ಯಾವುದೇ ಆಸನ, ಪ್ರಾಣಾಯಾಮಗಳನ್ನು ಸೂಕ್ತ ಗುರುಗಳ ಮೂಲಕವೇ ಕಲಿತು ಅಭ್ಯಾಸ ಆರಂಭಿಸಬೇಕು.
*ಪ್ರಾಣಾಯಾಮದ ಅಭ್ಯಾಸಕ್ಕೆ ಕುಳಿತಾಗ ಬೆನ್ನು, ಕತ್ತು ನೇರವಾಗಿದ್ದು, ಕಣ್ಣುಗಳನ್ನು ಮುಚ್ಚಿ ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸಬೇಕು.
( ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ!
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್!!
ಭಗವದ್ಗೀತಾ, ಅಧ್ಯಾಯ 6, ಶ್ಲೋಕ 13
ಶರೀರ, ತಲೆ ಮತ್ತು ಕುತ್ತಿಗೆಯನ್ನು ನೇರವಾಗಿ ಮತ್ತು ಅಚಲವಾಗಿ ಇಟ್ಟುಕೊಂಡು , ಬೇರೆ ದಿಕ್ಕುಗಳನ್ನು ನೋಡದೆ ದೃಷ್ಟಿಯನ್ನು ಸ್ಥಿರವಾಗಿ ಮೂಗಿನ ತುದಿಯಲ್ಲಿ ನಿಲ್ಲಿಸಿರಬೇಕು)
*ಉಸಿರಾಟದ ವೇಗ ಕ್ರಮಬದ್ಧವಾಗಿದ್ದು ಪೂರ್ಣಪ್ರಾಮಾಣದಲ್ಲಿ ಶ್ವಾಸ ಒಳಗೂ, ಹೊರಗೂ ಸಂಚರಿಸಬೇಕು.
*ಆಸನಗಳನ್ನು ಸರಿಯಾಗಿ ಉಸಿರಾಟದ ಜೊತೆಜೊತೆಗೇ ಮಾಡಬೇಕು.
* ಆಸನಗಳನ್ನು ನಿಧಾನವಾಗಿಯೂ ಸಾಕಷ್ಟು ವಿಶ್ರಾಂತಿಯೊಂದಿಗೆ ಅಭ್ಯಸಿಸಬೇಕು.
*ಹೊಟ್ಟೆ ಖಾಲಿಯಾಗಿದ್ದು, ಮಲ- ಮೂತ್ರ ಖಾಲಿಯಾಗಿಸಿಕೊಂಡಿರಬೇಕು.

ಇವೇ ಮೊದಲಾದ ಕ್ರಮಗಳೊಂದಿಗೆ ಗುರುಗಳ ಮೂಲಕವೇ ಕಲಿತು ಯೋಗದಿಂದ ರೋಗಮುಕ್ತರಾಗೋಣ. ಯೋಗಾಭ್ಯಾಸ ಕೇವಲ ಯೋಗ ದಿನಕ್ಕಷ್ಟೇ ಸೀಮಿತವಾಗಿರುವುದು ಬೇಡ. ಪ್ರತಿನಿತ್ಯದ ಅಭ್ಯಾಸದಿಂದ ಮಾತ್ರ ಫಲ ದೊರಕುವುದು.  ಯೋಗದಿಂದ ಎಲ್ಲಾ ಬಗೆಯ ರೋಗಗಳಿಂದ ಮುಕ್ತರಾಗಬಹುದು ಎಂಬ ಉತ್ಸಾಹದಿಂದ, ತಮ್ಮಷ್ಟಕ್ಕೆ ಯೋಗಾಭ್ಯಾಸ ಆರಂಭಿಸಿ, ವಿನಾಕಾರಣ ತೊಂದರೆಗಳನ್ನು ಅನುಭವಿಸಿ, ಕೊನೆಗೆ ಯೋಗದಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅಪವಾದವನ್ನು ಹೊರಿಸುವುದು ಬೇಡ!!!


🖋ಡಾ. ಪುನೀತ್ ರಾಘವೇಂದ್ರ

Monday, 3 April 2017

ಬಿಸಿಲ ಧಗೆಗೆ "ಶೀತಲಿ"ಯ ಬಗೆ!!


"ಅಯ್ಯೋ... ಎಂಥಾ ಬಿಸಿಲು ಮಾರಾಯ್ರೆ... ಹೊರಗೆ ಕಾಲಿಡುವುದೇ ಕಷ್ಟ. ಚರ್ಮ ಸುಟ್ಟು ಹೋಗುವ ಭಯ! ಹಾಗೆಂದು ಮನೆ ಒಳಗೇ ಇದ್ರೆ ಸೆಖೆ. ಇನ್ನು ಫ್ಯಾನ್ ಹಾಕಿದ್ರೆ ಬರೀ ಬಿಸಿ ಗಾಳಿ. ತುಟಿ, ಬಾಯಿ ಒಣಗಿ ಉಸಿರಾಡುವುದೇ ಸಂಕಟ. ದೇಹವಂತೂ ಒಣಗಿ, ಎಷ್ಟು ನೀರು ಕುಡಿದರೂ ಸಾಲುವುದಿಲ್ಲ. ಇದೇ ಉಷ್ಣದಿಂದಲೋ ಏನೋ ಬೆನ್ನು,ಕೈಯಲ್ಲೆಲ್ಲಾ ಬೊಬ್ಬೆ. ಜೊತೆಗೆ ಬೆವರೂ ತಾಗಿದಾಗ ಉರಿಯಿಂದಾಗಿ ಮೈಯೆಲ್ಲಾ ಸಂಕಟ. ಅದೆಷ್ಟೇ ಹಣ್ಣಿನ ರಸ/ ತರಕಾರಿ ರಸ ಕುಡಿದರೂ ಶರೀರ ಸ್ವಲ್ಪ ಹಗುರವಾದಂಥ ಅನುಭವವೇ ಹೊರತು ಸಂಪೂರ್ಣ ಸಮಾಧಾನವೇ ಇಲ್ಲ. ಕೊನೆಗೆ 'ಈ ವರ್ಷದ ಬೇಸಿಗೆ ಮುಗಿಯುವಾಗ ನಾವು ಬದುಕಿರುತ್ತೇವೆಯೋ?' ಎಂಬ  ಅನುಮಾನ!! ಸಾಕಪ್ಪಾ ... ಒಮ್ಮೆ ಮಳೆಗಾಲ ಶುರುವಾದರೆ ಸಾಕು.." ಇದು ಕೇವಲ ಒಬ್ಬಿಬ್ಬರ ಅನುಭವವಲ್ಲ. ಪ್ರತಿನಿತ್ಯ ಪೇಪರ್/ ದೂರದರ್ಶನದ ವಾರ್ತೆಯಲ್ಲಿ 'ಬಿಸಿಗಾಳಿಯಿಂದ ಅಲ್ಲೊಂದು ಮರಣ' ಕೇಳಿದಾಗಲೆಲ್ಲ ನಮ್ಮಲ್ಲಿ ಮೂಡುವ ಕಳವಳ. ಹೌದು... ಸಂಪೂರ್ಣ ಭಾರತದಲ್ಲಿ ವಾತಾವರಣದ ಉಷ್ಣತೆ ಸಿಕ್ಕಾಪಟ್ಟೆ ಎನ್ನುವಷ್ಟು ಹೆಚ್ಚಾಗುತ್ತಿದೆ. ಜೊತೆಗೆ ಅದರಿಂದ ಶರೀರ ಮೇಲಾಗುವ ಪರಿಣಾಮ ಕೂಡ. ಇಕ್ವಿನೋಕ್ಸ್ ಪರಿಣಾಮದಿಂದ ಉಷ್ಣತೆ 40ಡಿಗ್ರಿಗೂ ದಾಟಬಹುದೆಂಬ ಭಯಾನಕ ಸಂದೇಶಗಳೂ ನಮ್ಮ ಮೊಬೈಲ್ ಗಳಲ್ಲಿ ಹರಿದಾಡುತ್ತಿವೆ. ಹಾಗಿದ್ದಾಗ ನಾವು ಆ ಅತೀ ಉಷ್ಣತೆಯ ಪರಿಣಾಮವನ್ನು ಎದುರಿಸಲು ಸಮರ್ಥರೇ? ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೇ?ಕೇವಲ ಸಾಕಷ್ಟು ನೀರು ಕುಡಿಯುವುದರಿಂದ ಶರೀರವನ್ನು ತಂಪಾಗಿಸಲು ಸಾಧ್ಯವಿಲ್ಲವಲ್ಲವೇ? ಇಲ್ಲಿದೆ ಉತ್ತರ... ಅದೇ ಅತ್ಯಂತ ಸರಳವಾದ ಅಭ್ಯಾಸ "ಶೀತಲೀ ಪ್ರಾಣಾಯಾಮ". ಶರೀರವನ್ನು ತಂಪಾಗಿಡಲು ಅತ್ಯಂತ ಪರಿಣಾಮಕಾರೀ ಉಪಾಯ.

ಅಭ್ಯಾಸ :
ಜಿಹ್ವಾಯಾ ವಾಯುಮಾಕೃಷ್ಯ ಪೂರ್ವವತ್ ಕುಂಭಸಾಧನಂ!
ಶನಕೈಘ್ರಾರ್ಣರನ್ಘ್ರಾಭ್ಯಾಂ ರೇಚರೇತ್ ಪವನಂ ಸುಧೀಃ!!(ಹಠಯೋಗ ಪ್ರದೀಪಿಕಾ, ದ್ವಿತೀಯೋಪದೇಶ,57)
ನಾಲಿಗೆಯನ್ನು ಪೂರ್ತಿಯಾಗಿ ಹೊರಚಾಚಿ ಪಕ್ಷಿಯ ಕೊಕ್ಕಿನಂತೆ ಹೊರಳಿಸಿ ವಾಯುವನ್ನು ಸೇವಿಸಬೇಕು. ನಂತರ ಉಸಿರನ್ನು ಬಿಗಿಹಿಡಿದು ಕುಂಭಕವನ್ನು ಮಾಡಬೇಕು. ಕೊನೆಯಲ್ಲಿ ಅಭ್ಯಾಸಿಯು ಮೂಗಿನ ಎರಡೂ ಹೊರಳೆಗಳಿಂದ ವಾಯುವನ್ನು ಮೆಲ್ಲಗೆ ಹೊರಬಿಡಬೇಕು.

ಸೂಚನೆ:
* ಅಭ್ಯಾಸದ ಸಮಯದಲ್ಲಿ ಬೆನ್ನು ಕತ್ತು ನೇರವಾಗಿರಬೇಕು.
* ಊಟವಾದ ತಕ್ಷಣ ಅಭ್ಯಾಸ ಸೂಕ್ತವಲ್ಲ. ಕನಿಷ್ಟ 30 ನಿಮಿಷಗಳ ಅಂತರವಿರಲಿ.
* ಆರಂಭದಲ್ಲಿ ಅಭ್ಯಾಸಕ್ಕೆ ತೊಡಗುವವರು  ಕುಂಭಕ (ದೀರ್ಘವಾಗಿ ಶ್ವಾಸ ತೆಗೆದುಕೊಂಡ ನಂತರ ಸಾಧ್ಯವಾದಷ್ಟು ಹೊತ್ತು ಉಸಿರು ಬಿಗಿ ಹಿಡಿದು ನಂತರ ನಿಧಾನವಾಗಿ ಹೊರಬಿಡುವುದು) ಅಭ್ಯಾಸ ಮಾಡಬೇಕೆಂದಿಲ್ಲ. ಸರಳವಾಗಿ ಶ್ವಾಸೋಶ್ವಾಸದಿಂದಲೇ (ಆಂದರೆ ನಾಲಿಗೆಯ ಮೂಲಕ) ಆರಂಭಿಸಬಹುದು.
* 30ರಿಂದ 50 ಸುತ್ತುಗಳಂತೆ ದಿನಕ್ಕೆ 5 ಬಾರಿ ಅಭ್ಯಾಸ ಮಾಡುವುದರಿಂದ ಅತ್ಯದ್ಭುತ ಪರಿಣಾಮವನ್ನು ಪಡೆಯಬಹುದು.
* ದಿನನಿತ್ಯದ ಕೆಲಸದ ಸಂದರ್ಭದಲ್ಲಿ ಅಭ್ಯಾಸ ಮಾಡುವುದು ಸ್ವಲ್ಪ ಕಷ್ಟಕರ. ಹಾಗಿದ್ದೂ ಕೆಲವು ರೀತಿಯ ಉದ್ಯೋಗಿಗಳಿಗೆ ಸಾಧ್ಯ. ಉದಾ: ಕಂಪ್ಯೂಟರ್ ಕೆಲಸ ನಿರ್ವಹಿಸುವವರು ಕೆಲಸದ ಮಧ್ಯದಲ್ಲಿ ಸ್ವಲ್ಪ ವಿಶ್ರಾಂತಿಗೋಸ್ಕರವೆಂದು ನೇರವಾಗಿ ಕುಳಿತು ಆಭ್ಯಾಸ ಮಾಡಬಹುದು.

ಉಪಯೋಗಗಳು:
ಗುಲ್ಮಪ್ಲೀಹಾದಿಕಾನ್ ರೋಗಾನ್ ಜ್ವರಂ ಪಿತ್ತಂ ಕ್ಷುಧಾಂ ತೃಷಾಂ!
ವಿಷಾಣಿ ಶೀತಲೀ ನಾಮ ಕುಂಭಿಕೇಯಂ ನಿಹಾಂತಿ ಹಿ!!(ಹಠಯೋಗ ಪ್ರದೀಪಿಕಾ, ದ್ವಿತೀಯೋಪದೇಶ,58)
ಈ ಶೀತಲೀ ಎಂಬ ಕುಂಭಕ ಪ್ರಾಣಾಯಾಮವು ಗುಲ್ಮ, ಯಕೃತ್ ಸಂಬಂಧಿಸಿದ ರೋಗಗಳನ್ನು, ಜ್ವರ, ಪಿತ್ತ, ಹಸಿವು ನೀರಡಿಕೆ ಹಾಗೂ ವಿಷಗಳ ಪ್ರಭಾವಗಳನ್ನು ನಾಶಗೊಳಿಸುವುದು.
* ಶೀತಲೀ ಹೆಸರೇ ಸೂಚಿಸುವಂತೆ ಶರೀರಕ್ಕೆ ಶೀತ/ ತಂಪನ್ನುಂಟುಮಾಡುವುದು.
* ಹೊಟ್ಟೆ ಉರಿ, ಅಸಿಡಿಟಿ ಇರುವಾಗ ಅಭ್ಯಾಸ ಮಾಡಿದಲ್ಲಿ ಸಮಸ್ಯೆಗಳು ತಕ್ಷಣವೇ ಉಪಶಮನವಾಗುವುದು.
* ಬಾಯಾರಿಕಯಾಗುತ್ತಿದ್ದು, ನಾಲಿಗೆ ಒಣಗಿದ ಅನುಭವವಾಗುತ್ತಿದ್ದರೆ ಈ ಪ್ರಾಣಾಯಾಮವೊಂದು ಉತ್ತಮ ಪರಿಹಾರ.

ಮುನ್ನೆಚ್ಚರಿಕೆ:
ಅಸ್ತಮಾ, ಸೈನುಸೈಟಿಸ್ ಸಮಸ್ಯೆಯಿರುವವರು ಹವಾಮಾನ ತಂಪಾಗಿದ್ದಾಗ ಅಭ್ಯಾಸ ಮಾಡದಿರುವುದು ಸೂಕ್ತ.

  • ಡಾ.ಪುನೀತ್ ರಾಘವೇಂದ್ರ BNYS, MD (Yoga Clinical)

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...