Monday, 19 June 2017

ನಾವೇಕೆ " ಯೋಗಾಭ್ಯಾಸ" ಮಾಡಬೇಕು?



ನಾವೇಕೆ " ಯೋಗಾಭ್ಯಾಸ" ಮಾಡಬೇಕು?

"ಡಾಕ್ಟ್ರೇ... ನಾನು ಪ್ರತಿನಿತ್ಯ ಮುಂಜಾನೆ 5ಕ್ಕೇ ಏಳ್ತೀನಿ. ಎದ್ದು ಅರ್ಧ ಘಂಟೆ ವಾಕಿಂಗ್ ಹೋಗ್ತೀನಿ. ಸಮಯವಿದ್ರೆ ಕೆಲವೊಂದಿನ ಸಾಯಂಕಾಲನೂ ವಾಕಿಂಗ್ ಹೋಗೋದಿದೆ. ಜೊತೆಗೆ ಮನೆಲೇ ಗುಡ್ಸೋದು, ಒರ್ಸೋದು, ಪಾತ್ರೆ ತೊಳೆಯೋದೂ ನಾನೇ. ಹಂಗಾಗಿ ಸಾಕಷ್ಟು ದೈಹಿಕ ಚಟುವಟಿಕೇನೂ ನಡೆಯುತ್ತೆ. ಸೋ.. ನಾನ್ಯಾಕೆ ಯೋಗಾಸನ, ಪ್ರಾಣಾಯಾಮದ ಅಭ್ಯಾಸ ಮಾಡ್ಬೇಕು??" ಇದು ನನ್ನನ್ನು ಭೇಟಿಯಾಗೋ ಹೆಚ್ಚಿನ ಜನರು ಕೇಳೋ ಸಾಮಾನ್ಯ ಪ್ರಶ್ನೆ. ಸರಿ... ಇಷ್ಟೆಲ್ಲಾ ಮಾಡಿರೋದು ದೈಹಿಕ ಚಟುವಟಿಕೆಗೇನೋ ಸ್ವಲ್ಪ ಸಾಕು. ಆದರೆ ಮನಸ್ಸಿಗೆ? ಮನಸ್ಸಿನಿಂದಲೇ ದೇಹ ಮುಂದುವರೆಯೋದಲ್ಲವೇ? "ಮನಃ ಪ್ರಶಮನೋಪಾಯ ಯೋಗಃ ಇತ್ಯಭಿಧೀಯತೇ" ( ಯೋಗ ವಾಸಿಷ್ಠ) ಅಂದರೆ ಮನಸ್ಸನ್ನು ವಿಶ್ರಾಂತ/ ಪ್ರಶಾಂತಗೊಳಿಸಲು ಇರುವ ಉಪಾಯ/ ಸಾಧನವೇ ಯೋಗ.

ಯುಕ್ತಾಹಾರ ವಿಹಾರಸ್ಯ ಯುಕ್ತ ಚೇಷ್ಠಸ್ಯ ಕರ್ಮಸು !
ಯುಕ್ತ ಸ್ವಪ್ನಾವ ಬೋಧಸ್ಯ ಯೋಗೋ ಭವತಿ ದುಃಖಃ !! 
( ಭಗವದ್ಗೀತಾ, ಅಧ್ಯಾಯ 6. 17)
 ಕ್ರಮಬದ್ಧವಾದ ಆಹಾರ ಮತ್ತು ವಿಹಾರ/ ಪ್ರಯಾಣ , ಒಳ್ಳೆಯ ರೀತಿಯ ಚೇಷ್ಠೆ/ವಿನೋದ ಹಾಗೂ ಕೆಲಸಕಾರ್ಯಗಳು, ಸಮಪ್ರಮಾಣದ ನಿದ್ದೆ ಮತ್ತು ಎಚ್ಚರದಿಂದಿರುವಿಕೆ ಇವುಗಳನ್ನು ಹೊಂದಿದ್ದಾಗ ಯೋಗವು ದುಃಖಗಳನ್ನು ನಾಶಮಾಡುವುದು.

ಕೇವಲ ವಾಕಿಂಗ್/ಜಾಗಿಂಗ್ ಮಾಡುವುದು ಮಾತ್ರವಲ್ಲ ಹೊತ್ತಿಗೆ ಸರಿಯಾಗಿ ಊಟ/ತಿಂಡಿಗಳನ್ನೂ ಸೇವಿಸಬೇಕು. ಇಲ್ಲವಾದಲ್ಲಿ ಅಸಿಡಿಟಿ,ಅಜೀರ್ಣದ ತೊಂದರೆಗಳು ಕಾಣಿಸಿಕೊಳ್ಳುವುದು. ಪ್ರತಿನಿತ್ಯ ಗಂಟೆಗಟ್ಟಲೆ ಪ್ರಯಾಣ ಕಡಿಮೆಗೊಳಿಸುವುದು. ತಪ್ಪಿದಲ್ಲಿ ಬೆನ್ನುನೋವು, ಸೊಂಟನೋವು ಖಚಿತ!!! ಹಾಗೆಯೇ ನಮ್ಮ ವಿನೋದ/ ಕೆಲಸ ಕಾರ್ಯಗಳು ಸಾಕಷ್ಟು ಒತ್ತಡ ಮುಕ್ತವಾಗಿರಬೇಕು. ಒತ್ತಡಕ್ಕೆ ನಾವು ಕೊಟ್ಟ ಹೆಸರು  “STRESS”.. ಇದರ ದುಷ್ಪರಿಣಾಮಗಳು ನಿಮಗೆಲ್ಲಾ ತಿಳಿದೇ ಇದೆ ಅಲ್ಲವೇ!!!?? ಕಡಿಮೆ ನಿದ್ದೆ ಮತ್ತು ಅತಿಯಾಗಿ  ಎಚ್ಚರದಿಂದಿರುವುದು ಎಲ್ಲಾ ರೀತಿಯ ಹಾರ್ಮೋನ್ ಗಳ ಸಮಸ್ಯೆಗಳಿಗೆ ಮೂಲ ಕಾರಣ. ಆದರೆ ನಾವು ಯಾವಾಗ ಯೋಗಾಭ್ಯಾಸವನ್ನು ಆರಂಭಿಸುತ್ತೇವೋ ಎಲ್ಲಾ ವಿಷಯಗಳನ್ನು ಸರಿಪಡಿಸಿಕೊಳ್ಳಬಹುದು. ದೈಹಿಕ/ ಮಾನಸಿಕ ದುಃಖಗಳನ್ನೂ ದೂರಮಾಡಿಕೊಳ್ಳಬಹುದು.
ಹಠಸ್ಯ ಪ್ರಥಮಾಂಗತ್ವಾತ್ ಆಸನಂ ಪೂರ್ವಮುಚ್ಯತೇ!
ಕುರ್ಯಾತ್ತಾಸನಮ್ ಸ್ಥೈರ್ಯಂ ಆರೋಗ್ಯಂ ಅಂಗಲಾಘವಮ್!!
(ಹಠಯೋಗ ಪ್ರದೀಪಿಕಾ, ಅಧ್ಯಾಯ 1, 17)
ಹಠವಿದ್ಯೆಯಲ್ಲಿ ಪ್ರಥಮವಾಗಿ ಆಸನದ ಅಭ್ಯಾಸವನ್ನು ಆರಂಭಿಸಬೇಕು. ಆಸನವನ್ನು ಅಭ್ಯಸಿಸಿದಾಗ ಸ್ಥೈರ್ಯ, ಆರೋಗ್ಯ ಹಾಗೂ ಶರೀರದ ಜಡತ್ವ ದೂರವಾಗುವುದು ಅಂದರೆ ದೇಹ ಹಗುರವಾಗುವುದು.
ಈವಾಗ ನೀವೇ ಹೇಳಿ... ಕೇವಲ ವಾಕಿಂಗ್/ಜಾಗಿಂಗ್ ಮಾತ್ರ ಸಾಕೆ? ಯೋಗಾಭ್ಯಾಸವನ್ನೂ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆ? ಯೋಗಾಭ್ಯಾಸ  ಪ್ರತಿನಿತ್ಯ ಮಾಡುವುದು ಉತ್ತಮ. ಕೇವಲ "ಜೂನ್ 21"ಕ್ಕೆ ಮಾತ್ರ ಸೀಮಿತವಾಗದಿರಲಿ.



  • ಡಾ.ಪುನೀತ್ ರಾಘವೇಂದ್ರ ಕುಂಟುಕಾಡು BNYS,MD Yoga Clinical

No comments:

Post a Comment

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...