Saturday 6 April 2019

ಸರ್ವಜ್ಞನ ವಚನಗಳಲ್ಲಿ ಯೋಗ ಶಾಸ್ತ್ರ...


ಸನಾತನ ಭಾರತದ ಪ್ರಮುಖ ತತ್ವಶಾಸ್ತ್ರಗಳಾದ ನ್ಯಾಯ, ವೈಶೇಷಿಕ,ವೇದಾಂತ,ಮೀಮಾಂಸ, ಸಾಂಖ್ಯಗಳೊಡನೆ ಯೋಗ ದರ್ಶನವೂ ಸೇರಿ ಷಟ್‌ ದರ್ಶನಗಳೆನಿಸಿಕೊಂಡಿವೆ. ವೇದ ಸಂಹಿತೆಗಳು ಹಾಗೂ ಸಿಂಧೂ ಕಣಿವೆ ನಾಗರೀಕತೆಯ ಸ್ಥಳಗಳಲ್ಲಿ ದೊರೆತ ಆಸನ ಮತ್ತು ಧ್ಯಾನದ ಭಂಗಿಗಳನ್ನು ಹೋಲುವ ಮೊಹರುಗಳನ್ನು ಆಧಾರವಾಗಿಟ್ಟುಕೊಂಡರೆ, ಯೋಗ ಶಾಸ್ತ್ರದ ಕಾಲಮಾನ ಕ್ರಿ.ಪೂ. 3300-1700 ಎಂದು ಅಂದಾಜಿಸಬಹುದು. ಆದರೆ ಭಗವದ್ಗೀತೆಯ ಪ್ರಕಾರ ಅದಕ್ಕಿಂತಲೂ ಪುರಾತನವಾದದ್ದು ಯೋಗ ಶಾಸ್ತ್ರ.
“ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್‌
ವಿವಸ್ವಾನ್ಮನವೇ ಪ್ರಾಹ ಮನುರಿಕ್ಷ್ವಾಕವೇ Sಬ್ರವೀತ್‌ ││ ಭಗವದ್ಗೀತೆ 4.1”
ಈ ಅವಿನಾಶಿಯಾದ ಯೋಗವನ್ನು ನಾನು ಸೂರ್ಯನಿಗೆ ಹೇಳಿದ್ದೆ. ಸೂರ್ಯನು ತನ್ನ ಪುತ್ರ ಮನುವಿಗೆ ಹೇಳಿದನು. ಮನುವು ತನ್ನ ಪುತ್ರನಾದ ಇಕ್ಷ್ವಾಕುರಾಜನಿಗೆ ಹೇಳಿದನು.
ಪ್ರಸ್ತುತ ಯೋಗ ದರ್ಶನಕ್ಕೆ ಕ್ರಿ.ಪೂ. 2ರ ಪತಂಜಲಿ ಮುನಿಯ “ಯೋಗ ಸೂತ್ರ”ಗಳೇ ಪ್ರಾಚೀನ ಆಧಾರ ಗ್ರಂಥ. ಹಾಗಾಗಿ ಪತಂಜಲಿ ಮುನಿಯೇ “ಯೋಗ ದರ್ಶನ”ದ ಪ್ರತಿಪಾದಕರೆನಿಸಿಕೊಂಡಿದ್ದಾರೆ. ಇವುಗಳ ನಂತರ ಯೋಗ ಶಾಸ್ತ್ರಕ್ಕ ದೊರೆಯುವ ಆಧಾರ ಗ್ರಂಥಗಳು ಹಲವಾರು : ಭಗವದ್ಗೀತೆ, ಹಠಯೋಗ ಪ್ರದೀಪಿಕಾ, ಹಠ ರತ್ನಾವಲಿ, ಘೇರಂಡ ಸಂಹಿತಾ, ಹಠ ತತ್ವ ಕೌಮುದಿ, ಗೋರಕ್ಷ ಸಂಹಿತೆ, ಗೋರಕ್ಷ ಶತಕ, ಗೋರಕ್ಷ ಪದ್ಧತಿ, ಸಿದ್ಧ ಸಿದ್ಧಾಂತ ಪದ್ಧತಿ, ಶಿವ ಸಂಹಿತೆ ಇತ್ಯಾದಿ. ಇವುಗಳೆಲ್ಲಾ ಸಂಸ್ಕೃತ ಪಾಠಗಳಾಗಿದ್ದು ಕನ್ನಡ ಭಾಷಾ ಇತಿಹಾಸದಲ್ಲಿ ಯೋಗ ಪದ್ಧತಿಯ ಕುರಿತಾಗಿ ಅಷ್ಟೊಂದು ಮಾಹಿತಿಗಳಿಲ್ಲ.
ಇಂದಿನ ಕರ್ನಾಟಕ ಅಥವಾ ಕರುನಾಡು ಬರಿಯ ನಾಡಲ್ಲ. ಚತುರ್ಯುಗಗಳನ್ನೂ ಕಂಡ ಅಮೋಘ ನಾಡು. ಹುಯಿಲಗೋಳ ನಾರಾಯಣರು ಹೇಳಿದಂತೆ
ರಾಜನ್ಯರಿಪು ಪರಶು ರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು...
ಹೀಗಿರುವಾಗ ಇಲ್ಲಿನ ಕಾವ್ಯ ರಚನೆಗಳೂ ಅಮೋಘ. (ಆದ್ದರಿಂದಲೇ ಏನೋ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೇ ದೊರೆತಿರುವುದು). ಅದರ ಉಲ್ಲೇಖವೇ ಶ್ರೀವಿಜಯನ ʼಕವಿರಾಜ ಮಾರ್ಗʼ ದಲ್ಲಿ ಹೀಗಿದೆ “ಚದುರರ್‌ ನಿಜದಿಂ, ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಿ ಮತಿಗಳ್‌ “. ಹಾಗಾಗಿ ಯೋಗ ಶಾಸ್ತ್ರದ ಕುರಿತಾಗಿ ಕನ್ನಡದ ಇತಿಹಾಸದಲ್ಲಿ ಯಾವುದೇ ಉಲ್ಲೇಖಗಳಿಲ್ಲವೇ?? ಎಂದು ಯೋಚಿಸುತ್ತಿದ್ದಾಗ ದೊರೆತ ಗ್ರಂಥವೇ “ಸರ್ವಜ್ಞನ ವಚನಗಳು”. ಕರ್ತೃ ಪುಷ್ಪದತ್ತನ ಕಾವ್ಯನಾಮ “ಸರ್ವಜ್ಞ”ವಾಗಿದ್ದು, ಕ್ರಿ.ಶ. 17ನೇ ಶತಮಾನ ಈತನ ಕಾಲಮಾನ ಎಂಬುದು ಅಭಿಪ್ರಾಯ. ದೊರೆತುದರಲ್ಲಿ ಯೋಗಶಾಸ್ತ್ರಕ್ಕೆ ಸೂಕ್ತವಾದುದನ್ನು ಇಲ್ಲಿ ತಿಳಿಸಿಕೊಡುತ್ತೇನೆ.

Ø  ಆಸನದಿ ದೃಢವಾಗಿ ವಾಸನೆಯ ತಾ ಕಳೆದು
ಸೂಸುವಾ ಮನವ ಬಿಗಿದಿಟ್ಟ ಶಿವಯೋಗಿ
ಶಾಶ್ವತನು ಅಕ್ಕು ಸರ್ವಜ್ಞ ││
ಯೋಗಿಯಾದವನು ಸಾಧನೆಯ ಅಭ್ಯಾಸ ಮಾಡುವಾಗ ಆಸನ(ಯೋಗಾಸನ)ದಲ್ಲಿ ದೃಢವಾಗಿ ಕುಳಿತು, ಎಲ್ಲ ವಿಷಯಗಳ ಮೇಲಿನ ವಾಸನೆ(ಆಸೆ)ಯನ್ನು ಬಿಟ್ಟು, ಅನೇಕ ಕಡೆಗೆ ಹರಿದಾಡುವ ಮನಸ್ಸನ್ನು ಬಿಗಿಯಾಗಿ ಹಿಡಿಟ್ಟುಕೊಂಡಾಗ, ಶಾಶ್ವತವಾದ ಸಮಾಧಿ ನಂತರ ಮೋಕ್ಷವನ್ನು ಪಡೆಯುವನು. (“ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಃ ಉಪವಿಶ್ಯಾಸನೇ ಯುಂಜ್ಯಾದ್ಯೋಗಮಾತ್ಮವಿಶುದ್ಧಯೇ││ ಭಗವದ್ಗೀತೆ 6.12” : ಆಸನದಲ್ಲಿ ಕುಳಿತುಕೊಂಡು ಚಿತ್ತ ಮತ್ತು ಇಂದ್ರಿಯಗಳ ಕ್ರಿಯೆಗಳನ್ನು ವಶಪಡಿಸಿಕೊಂಡು, ಮನಸ್ಸನ್ನು ಏಕಾಗ್ರಗೊಳಿಸಿ, ಅಂತಃಕರಣದ ಶುದ್ಧಿಗಾಗಿ ಯೋಗಾಭ್ಯಾಸ ಮಾಡಬೇಕು. )

Ø  ಎತ್ತಿ ತಾ ಪ್ರಾಣವನು ನೆತ್ತಿಯಾ ಕೊನೆವರೆಗೆ
ಚಿತ್ತದಾ ಮರ್ಮವರಿದಿಪ್ಪ ಶಿವಯೋಗಿ
ಗೆತ್ತಣದು ಕೇಡು ಸರ್ವಜ್ಞ││
ಇಡಾ ಮತ್ತು ಪಿಂಗಲ ನಾಡಿಯ ಮೂಲಕ ಒಳತೆಗೆದುಕೊಂಡ ಪ್ರಾಣವಾಯುವನ್ನು ಮಧ್ಯದ ಸುಷುಮ್ನಾ ನಾಡಿಯ ಮೂಲಕ ಮೇಲೆತ್ತಿ/ ಮೇಲೆ ತಂದು , ನೆತ್ತಿಯಾ ಕೊನೆ ಅಂದರೆ ಬ್ರಹ್ಮರಂಧ್ರದ ತನಕ ತರುವ, ಮನಸ್ಸಿನ ಆ ಮರ್ಮ/ರಹಸ್ಯವನ್ನು ತಿಳಿದಿರುವ ಶಿವಯೋಗಿಗೆ ಕೇಡು ಅಥವಾ ಪುನರ್ಜನ್ಮ ಬಾರದು. ನೇರವಾಗಿ ಮೋಕ್ಷವೇ ದೊರೆಯುವುದು. (ರುದ್ರಗ್ರಂಥಿಯನ್ನು ಬೇಧಿಸಿದ ಪ್ರಾಣ ಬ್ರಹ್ಮರಂಧ್ರವನ್ನು ಪ್ರವೇಶಿಸುತ್ತದೆ. ಹಠಯೋಗದಲ್ಲಿ ಇದನ್ನು ನಿಷ್ಪತ್ತ್ಯಾವಸ್ಥೆ ಎನ್ನುತ್ತಾರೆ.)

Ø  ಕುಂಡಲಿಯ ಸರ್ಪವನುಅಂಡಲೆಯ ಬಲ್ಲವಗೆ
ಮಂಡಲವು ಮೂರು ವಶವಕ್ಕು ಕಾಲನಿಗೆ
ಗಂಡನಾಗಿಕ್ಕು ಸರ್ವಜ್ಞ││
ಸರ್ಪಸಮಾನವಾದ ಕುಂಡಲಿನೀ ಶಕ್ತಿ/ ನಾಡಿಯನ್ನು ದಾಟಬಲ್ಲವನಿಗೆ ಅರ್ಥಾತ್‌ ಯೋಗ ಮಾರ್ಗದಿಂದ ಮೀರಿದವನಿಗೆ , ಮೂರು ಲೋಕಗಳು ಅವನ ವಶವಾಗುವವು ಮತ್ತು ಅವನು ಕಾಲ(ಸಾವು)ವನ್ನು ಮೀರಿರುವನು.(ಅಮೃತತ್ವವನು ಹೊಂದುವನು). (“ಉತ್ಪನ್ನಶಕ್ತಿಬೋಧಸ್ಯ ತ್ಯಕ್ತನಿಃಶೇಷಕರ್ಮಣಃ ಯೋಗಿನಃ ಸಹಜಾವಸ್ಥಾ ಸ್ವಯಮೇವ ಪ್ರಜಾಯತೇ ││ಹಠಯೋಗ ಪ್ರದೀಪಿಕಾ 4.11 “: ಕುಂಡಲಿನಿ ಶಕ್ತಿ ಜಾಗೃತನಾದವನು, ಸರ್ವ ಕರ್ಮಫಲಗಳನ್ನು ತ್ಯಜಿಸಿರುವ ಯೋಗಿಗೆ ಸಹಜಾವಸ್ಥೆಯು ತಂತಾನೇ ಸಿದ್ಧಿಯಾಗುವುದು).

Ø  ಯೋಗಿಯಾ ಮನದಳವ ಯೋಗಿಯೇ ತಾ ಬಲ್ಲ
ಯೋಗಿ ಯೋಗದಲಿ ಬೆರೆದಿಹರೆ ಅವನು ನಿಜ
ಯೋಗಿಯೆಂದರಿಗು  ಸರ್ವಜ್ಞ││
ಯೋಗಿಯ ಮನಸ್ಸಿನ ಯೋಗ್ಯತೆಯನ್ನು ಯೋಗಿಯೇ ತಿಳಿಯಬೇಕಲ್ಲದೆ ಬೇರೆಯವರಿಗೆ ಅದು ತಿಳಿಯಲಾಗದು. ಯೋಗಿಯು ಯೋಗದಲ್ಲಿ ಆಸಕ್ತನಾದರೆ ಅವನೇ ನಿಜವಾದ ಯೋಗಿಯೆಂದು ತಿಳಿಯಬೇಕು. (“ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈವಾತ್ಮನಾ ಜಿತಃ ಭಗವದ್ಗೀತೆ 5.6” : ಯಾವ ಜೀವಾತ್ಮನು ಮನಸ್ಸು ಮತ್ತು ಇಂದ್ರಿಯಗಳ ಸಹಿತ ಆತ್ಮವನ್ನು ಗೆದ್ದಿರುತ್ತಾನೋ, ಆ ಜೀವಾತ್ಮನಿಗೆ ತಾನೇ ತನಗೆ ಮಿತ್ರನಾಗಿದ್ದಾನೆ.)

Ø  ತಪವ ಮಾಡುವೆನೆಂದು ಗುಪಿತ ಹೊಕ್ಕಿರಬೇಡ
ತಪದಲ್ಲಿ ಕುಪಿತು ಬಿಡದಿರಲು ಆ ತಪವು
ತಪತಾಪ ಕಂಡೈ ಸರ್ವಜ್ಞ││
ತಪಸ್ಸು ಮಾಡುತ್ತೇನೆಂದು ಮನೆಯನ್ನು ಬಿಟ್ಟು ಗುಹೆಯಲ್ಲಿ ಹೋಗಿ ಕುಳಿತಿರಬೇಡ. ಯಾಕೆಂದರೆ ಗುಹೆಯಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದರೂ ನಿನ್ನ ಮನಸ್ಸಿನೊಳಗಿನ ಸಿಟ್ಟನ್ನು ಬಿಡದಿದ್ದರೆ  ಆ ತಪಸ್ಸು ನಿನ್ನ ಮನಸ್ಸನ್ನು ಕಾಯಿಸುವ ಒಂದು ತಾಪವೆಂದೇ ತಿಳಿಯಬೇಕು. (ಅಶೇಷತಾಪತಪ್ತಾನಾಂ ಸಮಾಶ್ರಯ ಮಠೋ ಹಠಃ ಹಠಯೋಗ ಪ್ರದೀಪಿಕಾ 1.10 : ಕೊನೆಯಿಲ್ಲದ ತಾಪ (ಆಧ್ಯಾತ್ಮಿಕ, ಆದಿದೈವಿಕ, ಆದಿಭೌತಿಕ)ಗಳಿಂದ ಪೀಡಿತನಾದಾವನಿಗೆ ಆಶ್ರಯ ನೀಡುವ ಮಠವಾಗಿದೆ ಹಠಯೋಗ)

Ø  ಇಂದ್ರಿಯವು ಮೂತ್ರವುಂ ಒಂದೆ ನಾಳದಿ ಬಕ್ಕು
ಒಂದ ಬಿಟ್ಟೊಂದ ತಡೆದರೆ ಪರಬೊಮ್ಮ
ವೊಂದೆ ತಾನಕ್ಕು ಸರ್ವಜ್ಞ││ಇಂದ್ರಿಯವೂ (ರೇತಸ್ಸೂ) ಮೂತ್ರವೂ ಒಂದೇ ನಳಿಕೆಯಿಂದ ಬರುವುದು. ಹೀಗಿದ್ದರೂ ಇಂದ್ರಿಯನ್ನು ತಡೆಹಿಡಿದು (ದೈಹಿಕ ಕಾಮನೆಯನ್ನು ನಿಗ್ರಹಿಸಿ) ಮೂತ್ರವೊಂದನ್ನು ಮಾತ್ರ ಬಿಟ್ಟರೆ ಪರಬ್ರಹ್ಮನೂ ತಾನೂ ಒಂದೇ ಆಗುವುದು. ಅಂದರೆ ತಾನೇ ಪರಮಾತ್ಮ ಸ್ವರೂಪವಾಗುವಾನು. (ತಂತ್ರ ವಿದ್ಯೆಯ ಪಂಚ ʼʼ-ಗಳಲ್ಲಿ ಮೈಥುನವೂ ಒಂದು. ಇದು ತಾಂತ್ರಿಕರಲ್ಲಿ ಶಿವ-ಶಕ್ತಿಯರ ಸಂಯೋಗವೇ ಹೊರತು ದೈಹಿಕ ಕಾಮನೆಯಲ್ಲ. ಮೈಥುನ ನಡೆಸಿದರೂ ವೀರ್ಯ ಹೊರಬರಬಾರದು. ಹೊರ ಬಂದರೂ ಪುನಃ ಒಳಗೆ ಸೆಳೆದುಕೊಂಧು ಶರೀರದಲ್ಲಿ ಸೇರಿಸಿಕೊಳ್ಳಬೇಕು.  ಹಠಯೋಗದಲ್ಲಿ ಇದಕ್ಕೆ ವಜ್ರೋಲಿ ಅಭ್ಯಾಸ ಎನ್ನುವರು. ಇದನ್ನೇ ಪತಂಜಲಿಯ ಯೋಗ ಸೂತ್ರ ತಿಳಿಸಿರುವುದು “ಬ್ರಹ್ಮಚರ್ಯ ಪ್ರತಿಷ್ಠಾಯಾಂ ವೀರ್ಯಲಾಭಃ 2.38” )
Ø  ಖೇಚರದ ಮುದ್ರೆಯನು ಆಚರಿಸಲರಿದಿಹರೆ
    ಲೋಚನವು ಮೂರು ತನಗಕ್ಕು ಭೂಚರನು
ಖೇಚರನೆ ಅಕ್ಕು ಸರ್ವಜ್ಞ││
ಖೇಚರೀ ಮುದ್ರೆಯನು ಸತತವಾಗಿ ಅಭ್ಯಾಸ ಮಾಡಿದರೆ ಅವನಿಗೆ ತ್ರಿಲೋಚನ ಶಿವನ ಸ್ವರೂಪವು ಪ್ರಾಪ್ತವಾಗುವುದು. ಅಂತಹ ಮನುಷ್ಯನು ಭೂಮಿಯಲ್ಲಿ ಚಲಿಸುತ್ತಿದ್ದರೂ ಆಕಾಶ ಗಮನದ ಸಾಮರ್ಥ್ಯವನ್ನು ಪಡೆಯುವನು. (ನಾಲಗೆಯನ್ನು ಹಿಂದೆ ತಿರುವಿ ಮೂಗು ಹಾಗೂ ಕಂಠನಾಳಗಳ ಕಪಾಲದ ಸಂಧಿಯಾದ ಕಪಾಲದ ನಾಳದಲ್ಲಿಟ್ಟು ಎರಡೂ ಹುಬ್ಬುಗಳ ಮಧ್ಯದಲ್ಲಿ ದೃಷ್ಠಿಯನ್ನು ಕೇಂದ್ರೀಕರಿಸುವುದೇ “ಖೇಚರೀ ಮುದ್ರೆ”. “ಪೀಡ್ಯತೇ ನ ಸ ರೋಗೇಣ,ಲಿಪ್ಯತೇ ನ ಸ ಕರ್ಮಣಾ ಬಾಧ್ಯತೇ ನ ಸ ಕಾಲೇನ ಯೋ ಮುದ್ರಾಂ ವೇತ್ತಿ ಖೇಚರೀಂ││” ಹಠಯೋಗ ಪ್ರದೀಪಿಕಾ 3.40 :ಖೇಚರೀ ಮುದ್ರೆಯನ್ನರಿತ ಸಾಧಕನಿಗೆ ರೋಗಬಾಧೆ, ಕರ್ಮಬಾಧೆ ಹಾಗೂ ಕಾಲಬಾಧೆ ಬರಲಾರದು. )
Ø  ರಾಗವಿದ್ದರೆ ಭೋಗ ಭೋಗವಿದ್ದರೆ ರಾಗ
ರಾಗದಲಿ ಸಕಲಸಂಪದವು ಜಗದಲಿ ವಿ
ರಾಗವೇ ಯೋಗ ಸರ್ವಜ್ಞ││
ರಾಗ/ಆಸೆಯಿದ್ದರಷ್ಟೇ ಭೋಗವು ಸುಖದಾಯಕ. ಭೋಗವಿದ್ದರಷ್ಟೇ ಸುಖೋತ್ಪತ್ತಿಯಾಗುವುದು. ಆ ರಾಗದಿಂದಲೇ ಈ ಜಗತ್ತಿನ್ನಲ್ಲಿ ಸಕಲ ಸಂಪತ್ತೂ ಉಂಟಾಗುವುದು. ಆದರೆ ಜಗತ್ತಿನ್ನಲ್ಲಿರುವ ಆ ಸಕಲ ವಿಷಯಗಳಲ್ಲಿ ವೈರಾಗ್ಯ ಹೊಂದಿದಾಗಲೇ ಯೋಗವೆನಿಸುವುದು. (“ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇ಼ಷೌ ವ್ಯವಸ್ಥಿತೌ ತಯೋರ್ನ ವಶಮಾಗಚ್ಛೇತ್ತೌ ಹ್ಯಸ್ಯ ಪರಿಪಂಥಿನೌ ││ ಭಗವದ್ಗೀತೆ 3.34”: ಪ್ರತಿಯೊಂದು ಇಂದ್ರಿಯಗಳು ಇಂದ್ರಿಯಗಳ ವಿಷಯದಲ್ಲಿ ರಾಗ ಮತ್ತು ದ್ವೇಷಗಳು ಅಡಗಿರುತ್ತವೆ. ಮನುಷ್ಯನು ಅವುಗಳ ವಶವಾಗಬಾರದು. ಏಕೆಂದರೆ ಅವೆರಡೂ ಅವನ ಶ್ರೇಯಸ್ಸಿನ ಮಾರ್ಗದಲ್ಲಿ ವಿಘ್ನವುಂಟುಮಾಡುವ ಶತ್ರುಗಳು.
“ತಂ ವಿದ್ಯಾದ್ದುಃಖಸಂಯೋಗವಿಯೋಗಂ ಯೋಗಸಂಜ್ಞಿತಮ್‌ ಭಗವದ್ಗೀತೆ 6.23”: ಯಾವುದು ದುಃಖದ ಜೊತೆ ಸಂಯೋಗ ಹೊಂದುವುದನ್ನು ವಿಯೋಗ ಮಾಡುವುದೋ, ದೂರಗೊಳಿಸುವುದೋ ಅದನ್ನು ಯೋಗವೆಂದು ತಿಳಿ. )
Ø  ವೈರಾಗ್ಯಬಲದಿ ಸಂಸಾರಸಾಗರದೊಳಗೆ
ಆರಾರು ಧೀರರೀಜುವರೋ ಅವರೆಲ್ಲ
ಪಾರಾಗಿ ಸಿಗರು  ಸರ್ವಜ್ಞ││
ವೈರಾಗ್ಯದ ಬಲದಿಂದ ಸಂಸಾರವೆಂಬ ಸಮುದ್ರದಲಿ ಯಾವ ಧೈರ್ಯಶಾಲಿಗಳು ಈಜುವರೋ ಅವರೆಲ್ಲ ಪಾರಾಗುವರು ಅಂದರೆ ಸಂಸಾರದ ಜನನ-ಮರಣದ ಬಂಧನದಲ್ಲಿ ಸಿಲುಕುವುದಿಲ್ಲ. ( “ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ ಪತಂಜಲಿ ಯೋಗ ಸೂತ್ರ 1.12” : ಚಿತ್ತ ವೃತ್ತಿಗಳನ್ನು ಅಭ್ಯಾಸ ವೈರಾಗ್ಯಗಳಿಂದ ದೂರಗೊಳಿಸಬಹುದು.)
(ಆಕರ ಗ್ರಂಥ : ಸಟೀಕಾ ಸರ್ವಜ್ಞಮೂರ್ತಿ ವಚನಗಳು : ಭೀಮಭಟ್ಟ ಶಂಕರಭಟ್ಟ ಪೂಜಾರ)
ಸರ್ವಜ್ಞನ ವಚನಗಳಲ್ಲಿ ದೊರೆತ ಯೋಗ ಶಾಸ್ತ್ರ ಸಂಬಂಧೀ ಪ್ರಮುಖ ವಚನಗಳನ್ನು ತಿಳಿಸಿಕೊಟ್ಟಿದ್ದೇನೆ. ಹೆಚ್ಚಿನದು ಮುಂದಿನ ದಿನಗಳಲ್ಲಿ ಬರೆಯುತ್ತೇನೆ. ಧನ್ಯವಾದಗಳೊಂದಿಗೆ....
🖋 ಡಾ.ಪುನೀತ್ ರಾಘವೇಂದ್ರ ಕುಂಟುಕಾಡು BNYS, MD Yoga Clinical







No comments:

Post a Comment

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...