Thursday 30 March 2017

ಕಾಯಿಲೆಗಳು ನನಗೇ ಏಕೆ ಬರುತ್ತವೆ?

"ಡಾಕ್ಟ್ರೇ... ನಾನು ಹುಟ್ಟಿದಲ್ಲಿಂದ ಇಲ್ಲಿಯವರೆಗೆ ಮಾಂಸಾಹಾರ ಸೇವನೆಯೇ ಮಾಡಿಲ್ಲ, ಸಿಹಿ ಅನ್ನೋದೂ ಅಷ್ಟಕ್ಕಷ್ಟೆ. ಪ್ರತಿನಿತ್ಯ ಮನೆಯಿಂದಲೇ ಊಟ ಒಯ್ಯುತ್ತೇನೆ, ದಿನಂಪ್ರತಿ ಸಾಕಷ್ಟು ನೀರು ಕುಡಿಯುವುದು, ವ್ಯಾಯಾಮಗಳ ಅಭ್ಯಾಸವನ್ನೂ ಮಾಡುತ್ತೇನೆ. ಹಾಗಿದ್ದೂ ನನಗೇಗೆ ಮಧುಮೇಹ, ರಕ್ತದೊತ್ತಡದ ಸಮಸ್ಯೆ ಬಂತು!!?? ನನ್ನ ಮಾವನಿಗೂ ಹಾಗೆ.. ಸಾರಾಯಿ ಕುಡಿದವರಲ್ಲ.. ಬೀಡಿ,ಸಿಗರೇಟು ಸೇದಿದವರಲ್ಲ.. ಮೊನ್ನೆ ಮೊನ್ನೆ ಹೊಟ್ಟೆಯ ಕ್ಯಾನ್ಸರ್ ನಿಂದ ತೀರಿಕೊಂಡರು. ಇದೇಕೆ ಹೀಗೆ?? " ರೀತಿಯ ಪ್ರಶ್ನೆ ಕೇವಲ ನಾನೊಬ್ಬನೇ ಕೇಳಿರುವುದಲ್ಲ. ಪ್ರತಿಯೊಬ್ಬ ವೈದ್ಯರೂ ತಮ್ಮ ಜೀವನದುದ್ದಕ್ಕೂ ಕೇಳಿಸಿಕೊಂಡಿರುವ " ಅಮೂಲ್ಯ ಪ್ರಶ್ನೆ!". ಇಲ್ಲಿದೆ ಉತ್ತರ....

"ಕ್ಲೇಶಮೂಲ ಕರ್ಮಾಶಯೋ ದೃಷ್ಟಾದೃಷ್ಟ ಜನ್ಮವೇದನೀಯ" ( ಪತಂಜಲಿ ಯೋಗ ಸೂತ್ರ, ಸಾಧನ ಪಾದ, 12 )
ಕ್ಲೇಶ( ಅವಿದ್ಯಾ = ತಿಳುವಳಿಕೆಯಿಲ್ಲದಿರುವಿಕೆ, ಅಸ್ಮಿತಾ = ಅಹಂ, ರಾಗ= ಮೋಹ, ದ್ವೇಷ, ಅಭಿನಿವೇಶ= ತಾಳ್ಮೆಯಿಲ್ಲದಿರುವುದು)
ಇವುಗಳು ಮೂಲ ಕಾರಣ, ಕರ್ಮಗಳ ಫಲಗಳು ಕೂಡ ಕಾಣುವಂತೆ, ಕಾಣದೇ ಇರುವಂತೆ ಜನ್ಮ ಜನ್ಮಗಳಲ್ಲೂ ವೇದನೆ, ನೋವು ಉಂಟುಮಾಡುತ್ತವೆ. ಅಂದರೆ ಕೆಲವೊಂದನ್ನು ಅನುಭವಿಸುತ್ತೇವೆ. ಕೆಲವೊಂದು ಅನುಭವಿಸದೇ ಮುಂದಿನ ಜನ್ಮಕ್ಕೆ ಮುಂದೂಡಲ್ಪಡುತ್ತದೆ.

ಅವಿದ್ಯಾ= ತಿಳುವಳಿಕೆಯಿಲ್ಲದಿರುವಿಕೆ ಅಂದರೆ ಸಿಗರೇಟು/ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕವೆಂದು ಗೊತ್ತಿದ್ದೂ ಅತಿಯಾಗಿ ಸೇವಿಸುವುದು, ನೀರು ಸಾಕಷ್ಟು ಕುಡಿಯುವುದು ಶರೀರಕ್ಕೆ ಒಳ್ಳೆಯದೆಂದು ಗೊತ್ತಿದ್ದರೂ ನೀರು ಕುಡಿಯದಿರುವುದು

ಅಸ್ಮಿತಾ = ಅಹಂ, ಪ್ರತಿಯೊಂದೂ ನನ್ನಿಂದಲೇ/ ನಾನು ಹೇಳಿದ ರೀತಿಯಲ್ಲೇ  ಆಗಬೇಕೆಂದು ವರ್ತಿಸುವುದು (ಉದಾ: ಆಫೀಸ್ ನಲ್ಲಿ ಬಾಸ್) ತದನಂತರ ತಾನಂದುಕೊಂಡಂತೆ ಆಗದಿದ್ದಲ್ಲಿ ಅನುಭವಿಸುವ ಮಾನಸಿಕ ಒತ್ತಡದಿಂದ ಉಂಟಾಗುವ ರಕ್ತದೊತ್ತಡದ ಸಮಸ್ಯೆ

ರಾಗ = ಮೋಹ, ಸಾಕಷ್ಟು ಹಣ,ಒಡವೆ, ಅಧಿಕಾರ ಸಂಪಾದಿಸಬೇಕೆಂಬ ಆಸೆಯಲ್ಲಿ ನಿದ್ದೆಗೆಟ್ಟು / ವಿಶ್ರಾಂತಿಯಿಲ್ಲದೆ ಕೆಲಸ ಮಾಡಿದಾಗ ಉಂಟಾಗುವ ದೈಹಿಕ/ಮಾನಸಿಕ ಒತ್ತಡ ಕಾಯಿಲೆಗಳಿಗೆ ಕಾರಣ

ದ್ವೇಷ = ಇತರರ ಬೆಳವಣಿಗೆ, ಅಭಿವೃದ್ಧಿ ಕಂಡು ಪಡುವ ಅಸೂಯೆಯಿಂದ ಉಂಟಾಗುವ ಮಾನಸಿಕ/ದೈಹಿಕ ಒತ್ತಡ
ಇತರರ ಕುರಿತು ದ್ವೇಷ,ಅಸೂಯೆ ಪಟ್ಟರೆ ಅದು ನಮ್ಮನ್ನೇ ನಾವು ದ್ವೇಷಿಸಿಕೊಂಡಂತೆ...
ಪೂರ್ಣಮದಃ ಪೂರ್ಣಮಿದಮ್ ಪೂರ್ಣಾತ್ ಪೂರ್ಣಮುದಚ್ಯತೇ  |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ || (ಈಶಾವಾಸ್ಯ ಉಪನಿಷತ್ತು )
ಅದು (ಅಂದರೆ ಪರಮಾತ್ಮ) ಪೂರ್ಣ, ಇದು ಕೂಡ( ಅಂದರೆ ಆತ್ಮ) ಪೂರ್ಣ.ಆ ಪೂರ್ಣದಿಂದಲೇ ಈ ಪೂರ್ಣತ್ವವು ಬಂದಿರುತ್ತದೆ.ಅದೇ ಪೂರ್ಣದಿಂದ ಪೂರ್ಣವನ್ನು ಕಳೆದಾಗ ಉಳಿಯುವುದು ಕೂಡಾ ಪೂರ್ಣವೇ!! 

ಗಾಭರಿಯಾಗಬೇಡಿ... ಸರಳವಾಗಿ ಹೇಳುವುದಾದರೆ ನಾನು ಒಂದು ಆತ್ಮ. ಅದು ಪೂರ್ಣ. ನನ್ನ ಗೆಳೆಯ ಇನ್ನೊಂದು ಆತ್ಮ. ಅವನೂ ಪೂರ್ಣ. ಇಬ್ಬರೂ ಒಂದೇ ಮೂಲದಿಂದ ಬಂದಿರುವುದು. ಅದೇ ಆ ಪೂರ್ಣತ್ವ(ಅಥವಾ ಪರಮಾತ್ಮ ಎಂದೂ ತಿಳಿದುಕೊಳ್ಳಬಹುದು). ಅಂದರೆ ನನ್ನಲ್ಲಿ ಏನಿದೆಯೋ ನನ್ನ ಗೆಳೆಯನಲ್ಲೂ ಅದೇ ಇರಬೇಕಲ್ಲವೇ??!! ಹಾಗಾಗಿ ಅವನನ್ನು ದ್ವೇಷಿಸಿದರೆ ನನ್ನನ್ನು ನಾನು ದ್ವೇಷಿಸಿದಂತೆಯೇ ಅಲ್ಲವೆ??!! ಇದನ್ನೇ ನಾವು ಋಣಾತ್ಮಕ ಶಕ್ತಿ ಎನ್ನುವುದು( ನೆಗೆಟಿವ್ ಎನರ್ಜಿ). ಈ ಋಣಾತ್ಮಕ ಶಕ್ತಿಯೇ ಆರೋಗ್ಯವನ್ನು ಏರುಪೇರು ಮಾಡುವುದು.

ಅಭಿನಿವೇಶ = ತಾಳ್ವೆಯಿಲ್ಲದಿರುವಿಕೆ ( ಎಟಿಎಂ ಮುಂದೆ ನಿಂತಾಗ ಸರತಿ ಸಾಲು ದೊಡ್ಡದಿದ್ದರೆ ಉಂಟಾಗುವ ಉದ್ವೇಗ , ಹಾಗೆಯೇ ಯಾವುದೇ ಅಂಗಡಿಯಲ್ಲಿ ಬಿಲ್ ಪಾವತಿಸಲು ನಿಂತಾಗ ಕೆಲಸ ನಿಧಾನವಾದುದಕ್ಕೆ ಉಂಟಾಗುವ ಒತ್ತಡ )

ಕರ್ಮಾಶಯ = ಕರ್ಮ ಅಂದರೆ ನಾವು ಮಾಡುವ ಕಾರ್ಯ( ಅದು ನಾವು ಇತರರಿಗೆ ಮಾಡುವ ಸಹಾಯವೇ ಆಗಿರಬಹುದು ಅಥವಾ ಮನಸ್ಸಿನಲ್ಲಿ ಒಳ್ಳೆಯದು ಬಯಸುವುದೂ ಆಗಿಅರಬಹುದು), ಆಶಯ ಅಂದರೆ ಕರ್ಮಗಳು ನಮ್ಮಲ್ಲಿ ಪ್ರತಿಫಲಿಸುವ ರೀತಿ/ ನಮ್ಮ ಕರ್ಮದ ಫಲಗಳು. ನಾವು ಮಾಡಿದ್ದು ಒಳ್ಳೆಯದಾಗಿದ್ದಲ್ಲಿ ಒಳ್ಳೆಯ ಫಲಗಳು , ಹಾಗೆಯೇ ಕೆಟ್ಟದಾಗಿದ್ದಲ್ಲಿ ಕೆಟ್ಟ ಫಲಗಳು. ಹಾಗಿದ್ದೂ ಫಲಗಳ ಮೇಲೆ ಅವಲಂಭಿತಗೊಂಡ ನಾಲ್ಕು ಕರ್ಮಗಳು ಪ್ರಧಾನ : ಸಂಚಿತ ಕರ್ಮ, ಪ್ರಾರಬ್ಧ ಕರ್ಮ, ಕ್ರಿಯಾಮನ ಕರ್ಮ, ಆಗಮಿ ಕರ್ಮ. ರೀತಿಯಾಗಿ ನಾವು ಮಾಡಿದ ಕರ್ಮದ ಫಲಗಳು ಕೇವಲ ಜನ್ಮದಲ್ಲಷ್ಟೇ ಅನುಭವಿಸಿ ಮುಗಿಯುವಂಥದಲ್ಲ. ಮುಂದಿನ ಜನ್ಮಕ್ಕೂ ಸಾಗಿ ಅಲ್ಲಿ ಅನುಭವಿಸುವಂತೆ/ ವೇದನೆಗೆ ಒಳಪಡಲು ಕಾರಣವಾಗುತ್ತದೆ. ಕೆಲವೊಮ್ಮೆ ಕರ್ಮಫಲಗಳು ತೀವ್ರ ತರವಾಗಿರುತ್ತದೆ ಉದಾ: ಹುಟ್ಟಿನಿಂದಲೇ ಕೆಲವರು ಅಂಗವೈಕಲ್ಯತೆಯನ್ನು ಹೊಂದಿರುವುದು (ಆಧುನಿಕ ವಿಜ್ಞಾನದ ಪ್ರಕಾರ ನೋಡಿದಾಗ ತಂದೆ, ತಾಯಿಯಲ್ಲಿ ಯಾವುದೇ ಊನತೆ ಇರುವದಿಲ್ಲ). ಮಂದ ತರವಾಗಿದ್ದಲ್ಲಿ ಹುಟ್ಟಿದ ನಂತರ ಅನುಭವಿಸುವ ಕಾಯಿಲೆಗಳು. ಅವುಗಳೇ ಮಧುಮೇಹ,ರಕ್ತದೊತ್ತಡದ ಸಮಸ್ಯೆ, ಕ್ಯಾನ್ಸರ್ ಮುಂತಾದ ಕಾಯಿಲೆಗಳು.

ಡಾ. ಪುನೀತ್ ರಾಘವೇಂದ್ರ ಕುಂಟುಕಾಡು  BNYS, MD Yoga Clinical 

No comments:

Post a Comment

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...