Monday, 3 April 2017

ಬಿಸಿಲ ಧಗೆಗೆ "ಶೀತಲಿ"ಯ ಬಗೆ!!


"ಅಯ್ಯೋ... ಎಂಥಾ ಬಿಸಿಲು ಮಾರಾಯ್ರೆ... ಹೊರಗೆ ಕಾಲಿಡುವುದೇ ಕಷ್ಟ. ಚರ್ಮ ಸುಟ್ಟು ಹೋಗುವ ಭಯ! ಹಾಗೆಂದು ಮನೆ ಒಳಗೇ ಇದ್ರೆ ಸೆಖೆ. ಇನ್ನು ಫ್ಯಾನ್ ಹಾಕಿದ್ರೆ ಬರೀ ಬಿಸಿ ಗಾಳಿ. ತುಟಿ, ಬಾಯಿ ಒಣಗಿ ಉಸಿರಾಡುವುದೇ ಸಂಕಟ. ದೇಹವಂತೂ ಒಣಗಿ, ಎಷ್ಟು ನೀರು ಕುಡಿದರೂ ಸಾಲುವುದಿಲ್ಲ. ಇದೇ ಉಷ್ಣದಿಂದಲೋ ಏನೋ ಬೆನ್ನು,ಕೈಯಲ್ಲೆಲ್ಲಾ ಬೊಬ್ಬೆ. ಜೊತೆಗೆ ಬೆವರೂ ತಾಗಿದಾಗ ಉರಿಯಿಂದಾಗಿ ಮೈಯೆಲ್ಲಾ ಸಂಕಟ. ಅದೆಷ್ಟೇ ಹಣ್ಣಿನ ರಸ/ ತರಕಾರಿ ರಸ ಕುಡಿದರೂ ಶರೀರ ಸ್ವಲ್ಪ ಹಗುರವಾದಂಥ ಅನುಭವವೇ ಹೊರತು ಸಂಪೂರ್ಣ ಸಮಾಧಾನವೇ ಇಲ್ಲ. ಕೊನೆಗೆ ' ವರ್ಷದ ಬೇಸಿಗೆ ಮುಗಿಯುವಾಗ ನಾವು ಬದುಕಿರುತ್ತೇವೆಯೋ?' ಎಂಬ  ಅನುಮಾನ!! ಸಾಕಪ್ಪಾ ... ಒಮ್ಮೆ ಮಳೆಗಾಲ ಶುರುವಾದರೆ ಸಾಕು.." ಇದು ಕೇವಲ ಒಬ್ಬಿಬ್ಬರ ಅನುಭವವಲ್ಲ. ಪ್ರತಿನಿತ್ಯ ಪೇಪರ್/ ದೂರದರ್ಶನದ ವಾರ್ತೆಯಲ್ಲಿ 'ಬಿಸಿಗಾಳಿಯಿಂದ ಅಲ್ಲೊಂದು ಮರಣ' ಕೇಳಿದಾಗಲೆಲ್ಲ ನಮ್ಮಲ್ಲಿ ಮೂಡುವ ಕಳವಳ. ಹೌದು... ಸಂಪೂರ್ಣ ಭಾರತದಲ್ಲಿ ವಾತಾವರಣದ ಉಷ್ಣತೆ ಸಿಕ್ಕಾಪಟ್ಟೆ ಎನ್ನುವಷ್ಟು ಹೆಚ್ಚಾಗುತ್ತಿದೆ. ಜೊತೆಗೆ ಅದರಿಂದ ಶರೀರ ಮೇಲಾಗುವ ಪರಿಣಾಮ ಕೂಡ. ಇಕ್ವಿನೋಕ್ಸ್ ಪರಿಣಾಮದಿಂದ ಉಷ್ಣತೆ 40ಡಿಗ್ರಿಗೂ ದಾಟಬಹುದೆಂಬ ಭಯಾನಕ ಸಂದೇಶಗಳೂ ನಮ್ಮ ಮೊಬೈಲ್ ಗಳಲ್ಲಿ ಹರಿದಾಡುತ್ತಿವೆ. ಹಾಗಿದ್ದಾಗ ನಾವು ಅತೀ ಉಷ್ಣತೆಯ ಪರಿಣಾಮವನ್ನು ಎದುರಿಸಲು ಸಮರ್ಥರೇ? ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೇ?ಕೇವಲ ಸಾಕಷ್ಟು ನೀರು ಕುಡಿಯುವುದರಿಂದ ಶರೀರವನ್ನು ತಂಪಾಗಿಸಲು ಸಾಧ್ಯವಿಲ್ಲವಲ್ಲವೇ? ಇಲ್ಲಿದೆ ಉತ್ತರ... ಅದೇ ಅತ್ಯಂತ ಸರಳವಾದ ಅಭ್ಯಾಸ "ಶೀತಲೀ ಪ್ರಾಣಾಯಾಮ". ಶರೀರವನ್ನು ತಂಪಾಗಿಡಲು ಅತ್ಯಂತ ಪರಿಣಾಮಕಾರೀ ಉಪಾಯ.

ಅಭ್ಯಾಸ :
ಜಿಹ್ವಾಯಾ ವಾಯುಮಾಕೃಷ್ಯ ಪೂರ್ವವತ್ ಕುಂಭಸಾಧನಂ!
ಶನಕೈಘ್ರಾರ್ಣರನ್ಘ್ರಾಭ್ಯಾಂ ರೇಚರೇತ್ ಪವನಂ ಸುಧೀಃ!!(ಹಠಯೋಗ ಪ್ರದೀಪಿಕಾ, ದ್ವಿತೀಯೋಪದೇಶ,57)
ನಾಲಿಗೆಯನ್ನು ಪೂರ್ತಿಯಾಗಿ ಹೊರಚಾಚಿ ಪಕ್ಷಿಯ ಕೊಕ್ಕಿನಂತೆ ಹೊರಳಿಸಿ ವಾಯುವನ್ನು ಸೇವಿಸಬೇಕು. ನಂತರ ಉಸಿರನ್ನು ಬಿಗಿಹಿಡಿದು ಕುಂಭಕವನ್ನು ಮಾಡಬೇಕು. ಕೊನೆಯಲ್ಲಿ ಅಭ್ಯಾಸಿಯು ಮೂಗಿನ ಎರಡೂ ಹೊರಳೆಗಳಿಂದ ವಾಯುವನ್ನು ಮೆಲ್ಲಗೆ ಹೊರಬಿಡಬೇಕು.

ಸೂಚನೆ:
* ಅಭ್ಯಾಸದ ಸಮಯದಲ್ಲಿ ಬೆನ್ನು ಕತ್ತು ನೇರವಾಗಿರಬೇಕು.
* ಊಟವಾದ ತಕ್ಷಣ ಅಭ್ಯಾಸ ಸೂಕ್ತವಲ್ಲ. ಕನಿಷ್ಟ 30 ನಿಮಿಷಗಳ ಅಂತರವಿರಲಿ.
* ಆರಂಭದಲ್ಲಿ ಅಭ್ಯಾಸಕ್ಕೆ ತೊಡಗುವವರು  ಕುಂಭಕ (ದೀರ್ಘವಾಗಿ ಶ್ವಾಸ ತೆಗೆದುಕೊಂಡ ನಂತರ ಸಾಧ್ಯವಾದಷ್ಟು ಹೊತ್ತು ಉಸಿರು ಬಿಗಿ ಹಿಡಿದು ನಂತರ ನಿಧಾನವಾಗಿ ಹೊರಬಿಡುವುದು) ಅಭ್ಯಾಸ ಮಾಡಬೇಕೆಂದಿಲ್ಲ. ಸರಳವಾಗಿ ಶ್ವಾಸೋಶ್ವಾಸದಿಂದಲೇ (ಆಂದರೆ ನಾಲಿಗೆಯ ಮೂಲಕ) ಆರಂಭಿಸಬಹುದು.
* 30ರಿಂದ 50 ಸುತ್ತುಗಳಂತೆ ದಿನಕ್ಕೆ 5 ಬಾರಿ ಅಭ್ಯಾಸ ಮಾಡುವುದರಿಂದ ಅತ್ಯದ್ಭುತ ಪರಿಣಾಮವನ್ನು ಪಡೆಯಬಹುದು.
* ದಿನನಿತ್ಯದ ಕೆಲಸದ ಸಂದರ್ಭದಲ್ಲಿ ಅಭ್ಯಾಸ ಮಾಡುವುದು ಸ್ವಲ್ಪ ಕಷ್ಟಕರ. ಹಾಗಿದ್ದೂ ಕೆಲವು ರೀತಿಯ ಉದ್ಯೋಗಿಗಳಿಗೆ ಸಾಧ್ಯ. ಉದಾ: ಕಂಪ್ಯೂಟರ್ ಕೆಲಸ ನಿರ್ವಹಿಸುವವರು ಕೆಲಸದ ಮಧ್ಯದಲ್ಲಿ ಸ್ವಲ್ಪ ವಿಶ್ರಾಂತಿಗೋಸ್ಕರವೆಂದು ನೇರವಾಗಿ ಕುಳಿತು ಆಭ್ಯಾಸ ಮಾಡಬಹುದು.

ಉಪಯೋಗಗಳು:
ಗುಲ್ಮಪ್ಲೀಹಾದಿಕಾನ್ ರೋಗಾನ್ ಜ್ವರಂ ಪಿತ್ತಂ ಕ್ಷುಧಾಂ ತೃಷಾಂ!
ವಿಷಾಣಿ ಶೀತಲೀ ನಾಮ ಕುಂಭಿಕೇಯಂ ನಿಹಾಂತಿ ಹಿ!!(ಹಠಯೋಗ ಪ್ರದೀಪಿಕಾ, ದ್ವಿತೀಯೋಪದೇಶ,58)
ಶೀತಲೀ ಎಂಬ ಕುಂಭಕ ಪ್ರಾಣಾಯಾಮವು ಗುಲ್ಮ, ಯಕೃತ್ ಸಂಬಂಧಿಸಿದ ರೋಗಗಳನ್ನು, ಜ್ವರ, ಪಿತ್ತ, ಹಸಿವು ನೀರಡಿಕೆ ಹಾಗೂ ವಿಷಗಳ ಪ್ರಭಾವಗಳನ್ನು ನಾಶಗೊಳಿಸುವುದು.
* ಶೀತಲೀ ಹೆಸರೇ ಸೂಚಿಸುವಂತೆ ಶರೀರಕ್ಕೆ ಶೀತ/ ತಂಪನ್ನುಂಟುಮಾಡುವುದು.
* ಹೊಟ್ಟೆ ಉರಿ, ಅಸಿಡಿಟಿ ಇರುವಾಗ ಅಭ್ಯಾಸ ಮಾಡಿದಲ್ಲಿ ಸಮಸ್ಯೆಗಳು ತಕ್ಷಣವೇ ಉಪಶಮನವಾಗುವುದು.
* ಬಾಯಾರಿಕಯಾಗುತ್ತಿದ್ದು, ನಾಲಿಗೆ ಒಣಗಿದ ಅನುಭವವಾಗುತ್ತಿದ್ದರೆ ಈ ಪ್ರಾಣಾಯಾಮವೊಂದು ಉತ್ತಮ ಪರಿಹಾರ.

ಮುನ್ನೆಚ್ಚರಿಕೆ:
ಅಸ್ತಮಾ, ಸೈನುಸೈಟಿಸ್ ಸಮಸ್ಯೆಯಿರುವವರು ಹವಾಮಾನ ತಂಪಾಗಿದ್ದಾಗ ಅಭ್ಯಾಸ ಮಾಡದಿರುವುದು ಸೂಕ್ತ.

  • ಡಾ.ಪುನೀತ್ ರಾಘವೇಂದ್ರ BNYS, MD (Yoga Clinical)

Friday, 31 March 2017

ಕಫದ ಸಮಸ್ಯೆಯೇ?... ವಾಂತಿ ಮಾಡಿ!!


ಇದೇನು ಅಸಹ್ಯ...ಛೀ.. ಹೀಗೂ ಒಂದು ಚಿಕಿತ್ಸೆಯೇ?? ಕಫದ ಸಮಸ್ಯೆಗೆ ಕೆಮ್ಮಿ ಉಗುಳಿದರಾಯ್ತು! ಕಫವೆಲ್ಲಾ ಹೊರಗೆ ಬರುತ್ತದೆ.ಅದನ್ನು ಬಿಟ್ಟು ವಾಂತಿ ಮಾಡುವುದೇ! ಎಂದು ಮುಖ ಸಿಂಡರಿಸಿಕೊಳ್ಳುತ್ತಿದ್ದರೆ ಪೂರ್ತಿಯಾಗಿ ಬರವಣಿಗೆಯನ್ನು ಓದಿ ನೋಡಿ. ಹೌದು... ವಾಂತಿ ಮಾಡುವುದೂ ಒಂದು ಚಿಕಿತ್ಸಾ ಪದ್ಧತಿಯೇ. ಯೋಗ ಚಿಕಿತ್ಸೆಯಲ್ಲಿ ಅದನ್ನು "ವಮನ ಧೌತಿ" ಎಂದು ಕರೆಯುತ್ತಾರೆ. "ವಮನ" ಅಂದರೆ ವಾಂತಿ ಮಾಡುವುದು ,"ಧೌತಿ" ಅಂದರೆ ಚಿಲುಮೆ ಅಥವಾ ಚಿಮ್ಮುವುದು.ಹಾಗಾಗಿ "ವಮನ ಧೌತಿ" ಅಂದರೆ ನೀರು ಚಿಮ್ಮಿದಂತೆ/ ಕಾರಂಜಿಯಂತೆ ವಾಂತಿ ಮಾಡುವುದು. ಇಲ್ಲಿ ಎರಡು ವಿಧಗಳು:
1)ಕುಂಜಲ ಕ್ರಿಯಾ/ಗಜಕರಣೀ = ಆನೆ ನೀರು ಕುಡಿದು ಸೊಂಡಿಲಿನಿಂದ ಹೊರಚಿಮ್ಮಿಸಿದಂತೆ ಧೌತಿಯ ಅಭ್ಯಾಸ
2)ವ್ಯಾಘ್ರ ಕ್ರಿಯಾ = ಹುಲಿ ಆಹಾರ ತಿಂದು ೪ ಘಂಟೆಗಳ ನಂತರ ಹೊರಕಕ್ಕಿದಂತೆ ಊಟದ ನಂತರದ ಅಭ್ಯಾಸ
ವಾಂತಿ ಮಾಡುವುದು ಖಂಡಿತವಾಗಿಯೂ ಒಂದು ಅಸಹ್ಯ ಕ್ರಮವಲ್ಲ. ಜ್ವರದ ಸಂದರ್ಭದಲ್ಲಿ ನಾವು ವಾಂತಿಮಾಡಿದಾಗ ಶರೀರದಲ್ಲಿ ಜೀರ್ಣವಾಗದೇ ಉಳಿದ ಆಹಾರ ಹೊರಬಂದು ತದನಂತರ ಜೀರ್ಣಕ್ರಿಯೆ ಉತ್ತಮವಾಗುದು. ಇದು ಪ್ರಕೃತಿ ನಿಯಮ. ಕೆಲವೊಮ್ಮೆ ನಾಯಿ,ಬೆಕ್ಕುಗಳು ಹುಲ್ಲು ತಿಂದು, ತಿಂದ ಆಹಾರವನ್ನು ಕಕ್ಕುವುದನ್ನು ನೀವು ಗಮನಿಸಿರಬಹುದು.

ಅಭ್ಯಾಸ ಕ್ರಮ :
* ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿದ್ದಾಗ ಹೊಟ್ಟೆ ತುಂಬ, ಒಂದಿಷ್ಟು ಉಪ್ಪು ಹಾಕಿದ ಉಗುರು ಬೆಚ್ಚಗಿನ ನೀರು ಕುಡಿಯುವುದು.
* ನೀರು ಕುಡಿಯುವಾಗ ಅರ್ಧ ಕುಳಿತಿರಬೇಕು ( ಅಂದರೆ ಮಲವಿಸರ್ಜನೆಗೆ ಕುಳಿತಂತೆ, ಆದರೆ ಒಂದು ಕಾಲು ಮಡಚಿದ್ದು ಇನ್ನೊಂದು ಮಡಚಿದ ಕಾಲಿನ ಮೊಣಕಾಲು ನೆಲಕ್ಕೆ ಊರಿರುವುದು)
* ನೀರು ಕುಡಿಯುವಾಗ ಮಧ್ಯೆ ಮಧ್ಯೆ ವಿಶ್ರಾಂತಿ ಕೊಡದೇ ಒಂದೇ ವೇಗದಲ್ಲಿ, ಸರಾಗವಾಗಿ ಹೊಟ್ಟೆ ಪೂರ್ತಿ ನೀರು ಕುಡಿಯುವುದು.
* ಹೊಟ್ಟೆ ಪೂರ್ತಿಯಾದ ಮೇಲೆ, ಎರಡೂ ಕಾಲುಗಳನ್ನು ಅಗಲಿಸಿ ನಿಂತುಕೊಂಡು, ಸಾಕಷ್ಟು ಮುಂಭಾಗಕ್ಕೆ ಬಾಗಿ, ಕೈಯ ತೋರುಬೆರಳು, ಮಧ್ಯದ ಬೆರಳಿನಿಂದ ಕಿರುನಾಲಿಗೆಯನ್ನು ಮೀಟಿದಾಗ ನೀರು ಹೊರಚಿಮ್ಮುವುದು. ಹೊಟ್ಟೆ ಸಂಪೂರ್ಣವಾಗಿ ಖಾಲಿಯಾದ ಮೇಲೆಯೇ ಕೈ ಹೊರತೆಗೆಯುವುದು. ( ಬದಲಾವಣೆ: ಕೈ ಬೆರಳುಗಳಿಂದ ಕಷ್ಟವಾದಲ್ಲಿ ಹಲ್ಲುಜ್ಜುವ ಬ್ರಷ್ ಕೂಡ ಬಳಸಬಹುದು)

ಮುನ್ನೆಚ್ಚರಿಕಾ ಕ್ರಮಗಳು:
* ರಕ್ತದೊತ್ತಡದ ಸಮಸ್ಯೆ, ಹೃದಯ ಸಂಬಂಧೀ ಸಮಸ್ಯೆಯಿರುವವರು ಅಭ್ಯಾಸದ ಮೊದಲು ವೈದ್ಯರ ಸಲಹೆ ಪಡೆಯುವುದು ಅತೀ ಅವಶ್ಯ.
* ಕುಡಿದ ಉಪ್ಪು ನೀರು ಪೂರ್ತಿಯಾಗಿ ಖಾಲಿಯಾಗದಿದ್ದಲ್ಲಿ, ಸ್ವಲ್ಪ ಸಮಯದ ನಂತರ 2 ರಿಂದ 3 ಸಲ ಭೇದಿಯಾಗುವ ಸಾಧ್ಯತೆ ಇರುತ್ತದೆ. ಮುನ್ನೆಚ್ಚರಿಕೆ ಅವಶ್ಯ.
*ಧೌತಿ ಅಭ್ಯಾಸದ ನಂತದ ಉಪ್ಪು,ಹುಳಿ, ಖಾರ ರಹಿತ ಸಾತ್ವಿಕ ಆಹಾರ ಅತೀ ಅವಶ್ಯ.ಇಲ್ಲವಾದಲ್ಲಿ ಹೊಟ್ಟೆ ಹಾಳಾಗುವುದು!! ಸಾಕಷ್ಟು ತುಪ್ಪದೊಂದಿಗೆ ಕಿಚಡಿಯಂಥ ಸ್ನಿಗ್ಧಾಹಾರ ಸೂಕ್ತ.

ಪ್ರಯೋಜನಗಳು :
ಕಾಸ ಶ್ವಾಸ ಪ್ಲೀಹ ಕುಷ್ಠಂ ಕಫರೋಗಶ್ಚ ವಿಂಶತಿಃ!
ಧೌತಿಕರ್ಮ ಪ್ರಭಾವೇಣ ಪ್ರಯಾಂತ್ಯೇವ ನ ಸಂಶಯಃ!!(ಹಠಯೋಗ ಪ್ರದೀಪಿಕಾ, ದ್ವಿತೀಯೋಪದೇಶ, 25)
ಅಸ್ಥಮಾ, ಕೆಮ್ಮು, ಯಕೃತ್ತಿನ ರೋಗಗಳು, ಕುಷ್ಠರೋಗ ಹಾಗೂ ಇಪ್ಪತ್ತು ಬಗೆಯ ಕಫರೋಗಗಳು ಧೌತಿಕರ್ಮದ ಪರಿಣಾಮದಿಂದ ನಾಶವಾಗುತ್ತವೆಂಬುದರಲ್ಲಿ ಸಂಶಯವಿಲ್ಲ.
ವಾರಕ್ಕೆ ಮೂರು ಬಾರಿ ಅಭ್ಯಾಸ ಮಾಡುವುದು ಉತ್ತಮ. ಕಡಿಮೆಯಂದರೂ ವಾರಕ್ಕೊಮ್ಮೆ ಪ್ರಶಸ್ತ. ಇದರಿಂದ ಅಸ್ತಮಾ, ಅಲರ್ಜಿ, ಅಸಿಡಿಟಿ, ಹುಳಿತೇಗು ದೂರವಾಗಿ ಜೀರ್ಣಶಕ್ತಿ ಉತ್ತಮಗೊಳ್ಳುವುದು. ಪಚನ ಕ್ರಿಯೆಯೂ ಉತ್ತಮಗೊಂಡಂತೆ ಮಲಬದ್ಧತೆಯ ಸಮಸ್ಯೆ ದೂರವಾಗುವುದು. ಮೈಗ್ರೇನ್ ತಲೆನೋವು, ಬೆಳಗೆದ್ದಾಗ ಬಾಯಿಯಲ್ಲಿ ಕಹಿ ಅನುಭವವಾಗುವ ಪಿತ್ತದ ಸಮಸ್ಯೆಗಳಿಗೆ "ಧೌತಿ ಕರ್ಮ" ಅತ್ಯುತ್ತಮ ಪರಿಹಾರ.


ಡಾ. ಪುನೀತ್ ರಾಘವೇಂದ್ರ ಕುಂಟುಕಾಡು BNYS,MD Yoga Clinical 

Thursday, 30 March 2017

ಕಾಯಿಲೆಗಳು ನನಗೇ ಏಕೆ ಬರುತ್ತವೆ?

"ಡಾಕ್ಟ್ರೇ... ನಾನು ಹುಟ್ಟಿದಲ್ಲಿಂದ ಇಲ್ಲಿಯವರೆಗೆ ಮಾಂಸಾಹಾರ ಸೇವನೆಯೇ ಮಾಡಿಲ್ಲ, ಸಿಹಿ ಅನ್ನೋದೂ ಅಷ್ಟಕ್ಕಷ್ಟೆ. ಪ್ರತಿನಿತ್ಯ ಮನೆಯಿಂದಲೇ ಊಟ ಒಯ್ಯುತ್ತೇನೆ, ದಿನಂಪ್ರತಿ ಸಾಕಷ್ಟು ನೀರು ಕುಡಿಯುವುದು, ವ್ಯಾಯಾಮಗಳ ಅಭ್ಯಾಸವನ್ನೂ ಮಾಡುತ್ತೇನೆ. ಹಾಗಿದ್ದೂ ನನಗೇಗೆ ಮಧುಮೇಹ, ರಕ್ತದೊತ್ತಡದ ಸಮಸ್ಯೆ ಬಂತು!!?? ನನ್ನ ಮಾವನಿಗೂ ಹಾಗೆ.. ಸಾರಾಯಿ ಕುಡಿದವರಲ್ಲ.. ಬೀಡಿ,ಸಿಗರೇಟು ಸೇದಿದವರಲ್ಲ.. ಮೊನ್ನೆ ಮೊನ್ನೆ ಹೊಟ್ಟೆಯ ಕ್ಯಾನ್ಸರ್ ನಿಂದ ತೀರಿಕೊಂಡರು. ಇದೇಕೆ ಹೀಗೆ?? " ರೀತಿಯ ಪ್ರಶ್ನೆ ಕೇವಲ ನಾನೊಬ್ಬನೇ ಕೇಳಿರುವುದಲ್ಲ. ಪ್ರತಿಯೊಬ್ಬ ವೈದ್ಯರೂ ತಮ್ಮ ಜೀವನದುದ್ದಕ್ಕೂ ಕೇಳಿಸಿಕೊಂಡಿರುವ " ಅಮೂಲ್ಯ ಪ್ರಶ್ನೆ!". ಇಲ್ಲಿದೆ ಉತ್ತರ....

"ಕ್ಲೇಶಮೂಲ ಕರ್ಮಾಶಯೋ ದೃಷ್ಟಾದೃಷ್ಟ ಜನ್ಮವೇದನೀಯ" ( ಪತಂಜಲಿ ಯೋಗ ಸೂತ್ರ, ಸಾಧನ ಪಾದ, 12 )
ಕ್ಲೇಶ( ಅವಿದ್ಯಾ = ತಿಳುವಳಿಕೆಯಿಲ್ಲದಿರುವಿಕೆ, ಅಸ್ಮಿತಾ = ಅಹಂ, ರಾಗ= ಮೋಹ, ದ್ವೇಷ, ಅಭಿನಿವೇಶ= ತಾಳ್ಮೆಯಿಲ್ಲದಿರುವುದು)
ಇವುಗಳು ಮೂಲ ಕಾರಣ, ಕರ್ಮಗಳ ಫಲಗಳು ಕೂಡ ಕಾಣುವಂತೆ, ಕಾಣದೇ ಇರುವಂತೆ ಜನ್ಮ ಜನ್ಮಗಳಲ್ಲೂ ವೇದನೆ, ನೋವು ಉಂಟುಮಾಡುತ್ತವೆ. ಅಂದರೆ ಕೆಲವೊಂದನ್ನು ಅನುಭವಿಸುತ್ತೇವೆ. ಕೆಲವೊಂದು ಅನುಭವಿಸದೇ ಮುಂದಿನ ಜನ್ಮಕ್ಕೆ ಮುಂದೂಡಲ್ಪಡುತ್ತದೆ.

ಅವಿದ್ಯಾ= ತಿಳುವಳಿಕೆಯಿಲ್ಲದಿರುವಿಕೆ ಅಂದರೆ ಸಿಗರೇಟು/ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕವೆಂದು ಗೊತ್ತಿದ್ದೂ ಅತಿಯಾಗಿ ಸೇವಿಸುವುದು, ನೀರು ಸಾಕಷ್ಟು ಕುಡಿಯುವುದು ಶರೀರಕ್ಕೆ ಒಳ್ಳೆಯದೆಂದು ಗೊತ್ತಿದ್ದರೂ ನೀರು ಕುಡಿಯದಿರುವುದು

ಅಸ್ಮಿತಾ = ಅಹಂ, ಪ್ರತಿಯೊಂದೂ ನನ್ನಿಂದಲೇ/ ನಾನು ಹೇಳಿದ ರೀತಿಯಲ್ಲೇ  ಆಗಬೇಕೆಂದು ವರ್ತಿಸುವುದು (ಉದಾ: ಆಫೀಸ್ ನಲ್ಲಿ ಬಾಸ್) ತದನಂತರ ತಾನಂದುಕೊಂಡಂತೆ ಆಗದಿದ್ದಲ್ಲಿ ಅನುಭವಿಸುವ ಮಾನಸಿಕ ಒತ್ತಡದಿಂದ ಉಂಟಾಗುವ ರಕ್ತದೊತ್ತಡದ ಸಮಸ್ಯೆ

ರಾಗ = ಮೋಹ, ಸಾಕಷ್ಟು ಹಣ,ಒಡವೆ, ಅಧಿಕಾರ ಸಂಪಾದಿಸಬೇಕೆಂಬ ಆಸೆಯಲ್ಲಿ ನಿದ್ದೆಗೆಟ್ಟು / ವಿಶ್ರಾಂತಿಯಿಲ್ಲದೆ ಕೆಲಸ ಮಾಡಿದಾಗ ಉಂಟಾಗುವ ದೈಹಿಕ/ಮಾನಸಿಕ ಒತ್ತಡ ಕಾಯಿಲೆಗಳಿಗೆ ಕಾರಣ

ದ್ವೇಷ = ಇತರರ ಬೆಳವಣಿಗೆ, ಅಭಿವೃದ್ಧಿ ಕಂಡು ಪಡುವ ಅಸೂಯೆಯಿಂದ ಉಂಟಾಗುವ ಮಾನಸಿಕ/ದೈಹಿಕ ಒತ್ತಡ
ಇತರರ ಕುರಿತು ದ್ವೇಷ,ಅಸೂಯೆ ಪಟ್ಟರೆ ಅದು ನಮ್ಮನ್ನೇ ನಾವು ದ್ವೇಷಿಸಿಕೊಂಡಂತೆ...
ಪೂರ್ಣಮದಃ ಪೂರ್ಣಮಿದಮ್ ಪೂರ್ಣಾತ್ ಪೂರ್ಣಮುದಚ್ಯತೇ  |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ || (ಈಶಾವಾಸ್ಯ ಉಪನಿಷತ್ತು )
ಅದು (ಅಂದರೆ ಪರಮಾತ್ಮ) ಪೂರ್ಣ, ಇದು ಕೂಡ( ಅಂದರೆ ಆತ್ಮ) ಪೂರ್ಣ.ಆ ಪೂರ್ಣದಿಂದಲೇ ಈ ಪೂರ್ಣತ್ವವು ಬಂದಿರುತ್ತದೆ.ಅದೇ ಪೂರ್ಣದಿಂದ ಪೂರ್ಣವನ್ನು ಕಳೆದಾಗ ಉಳಿಯುವುದು ಕೂಡಾ ಪೂರ್ಣವೇ!! 

ಗಾಭರಿಯಾಗಬೇಡಿ... ಸರಳವಾಗಿ ಹೇಳುವುದಾದರೆ ನಾನು ಒಂದು ಆತ್ಮ. ಅದು ಪೂರ್ಣ. ನನ್ನ ಗೆಳೆಯ ಇನ್ನೊಂದು ಆತ್ಮ. ಅವನೂ ಪೂರ್ಣ. ಇಬ್ಬರೂ ಒಂದೇ ಮೂಲದಿಂದ ಬಂದಿರುವುದು. ಅದೇ ಆ ಪೂರ್ಣತ್ವ(ಅಥವಾ ಪರಮಾತ್ಮ ಎಂದೂ ತಿಳಿದುಕೊಳ್ಳಬಹುದು). ಅಂದರೆ ನನ್ನಲ್ಲಿ ಏನಿದೆಯೋ ನನ್ನ ಗೆಳೆಯನಲ್ಲೂ ಅದೇ ಇರಬೇಕಲ್ಲವೇ??!! ಹಾಗಾಗಿ ಅವನನ್ನು ದ್ವೇಷಿಸಿದರೆ ನನ್ನನ್ನು ನಾನು ದ್ವೇಷಿಸಿದಂತೆಯೇ ಅಲ್ಲವೆ??!! ಇದನ್ನೇ ನಾವು ಋಣಾತ್ಮಕ ಶಕ್ತಿ ಎನ್ನುವುದು( ನೆಗೆಟಿವ್ ಎನರ್ಜಿ). ಈ ಋಣಾತ್ಮಕ ಶಕ್ತಿಯೇ ಆರೋಗ್ಯವನ್ನು ಏರುಪೇರು ಮಾಡುವುದು.

ಅಭಿನಿವೇಶ = ತಾಳ್ವೆಯಿಲ್ಲದಿರುವಿಕೆ ( ಎಟಿಎಂ ಮುಂದೆ ನಿಂತಾಗ ಸರತಿ ಸಾಲು ದೊಡ್ಡದಿದ್ದರೆ ಉಂಟಾಗುವ ಉದ್ವೇಗ , ಹಾಗೆಯೇ ಯಾವುದೇ ಅಂಗಡಿಯಲ್ಲಿ ಬಿಲ್ ಪಾವತಿಸಲು ನಿಂತಾಗ ಕೆಲಸ ನಿಧಾನವಾದುದಕ್ಕೆ ಉಂಟಾಗುವ ಒತ್ತಡ )

ಕರ್ಮಾಶಯ = ಕರ್ಮ ಅಂದರೆ ನಾವು ಮಾಡುವ ಕಾರ್ಯ( ಅದು ನಾವು ಇತರರಿಗೆ ಮಾಡುವ ಸಹಾಯವೇ ಆಗಿರಬಹುದು ಅಥವಾ ಮನಸ್ಸಿನಲ್ಲಿ ಒಳ್ಳೆಯದು ಬಯಸುವುದೂ ಆಗಿಅರಬಹುದು), ಆಶಯ ಅಂದರೆ ಕರ್ಮಗಳು ನಮ್ಮಲ್ಲಿ ಪ್ರತಿಫಲಿಸುವ ರೀತಿ/ ನಮ್ಮ ಕರ್ಮದ ಫಲಗಳು. ನಾವು ಮಾಡಿದ್ದು ಒಳ್ಳೆಯದಾಗಿದ್ದಲ್ಲಿ ಒಳ್ಳೆಯ ಫಲಗಳು , ಹಾಗೆಯೇ ಕೆಟ್ಟದಾಗಿದ್ದಲ್ಲಿ ಕೆಟ್ಟ ಫಲಗಳು. ಹಾಗಿದ್ದೂ ಫಲಗಳ ಮೇಲೆ ಅವಲಂಭಿತಗೊಂಡ ನಾಲ್ಕು ಕರ್ಮಗಳು ಪ್ರಧಾನ : ಸಂಚಿತ ಕರ್ಮ, ಪ್ರಾರಬ್ಧ ಕರ್ಮ, ಕ್ರಿಯಾಮನ ಕರ್ಮ, ಆಗಮಿ ಕರ್ಮ. ರೀತಿಯಾಗಿ ನಾವು ಮಾಡಿದ ಕರ್ಮದ ಫಲಗಳು ಕೇವಲ ಜನ್ಮದಲ್ಲಷ್ಟೇ ಅನುಭವಿಸಿ ಮುಗಿಯುವಂಥದಲ್ಲ. ಮುಂದಿನ ಜನ್ಮಕ್ಕೂ ಸಾಗಿ ಅಲ್ಲಿ ಅನುಭವಿಸುವಂತೆ/ ವೇದನೆಗೆ ಒಳಪಡಲು ಕಾರಣವಾಗುತ್ತದೆ. ಕೆಲವೊಮ್ಮೆ ಕರ್ಮಫಲಗಳು ತೀವ್ರ ತರವಾಗಿರುತ್ತದೆ ಉದಾ: ಹುಟ್ಟಿನಿಂದಲೇ ಕೆಲವರು ಅಂಗವೈಕಲ್ಯತೆಯನ್ನು ಹೊಂದಿರುವುದು (ಆಧುನಿಕ ವಿಜ್ಞಾನದ ಪ್ರಕಾರ ನೋಡಿದಾಗ ತಂದೆ, ತಾಯಿಯಲ್ಲಿ ಯಾವುದೇ ಊನತೆ ಇರುವದಿಲ್ಲ). ಮಂದ ತರವಾಗಿದ್ದಲ್ಲಿ ಹುಟ್ಟಿದ ನಂತರ ಅನುಭವಿಸುವ ಕಾಯಿಲೆಗಳು. ಅವುಗಳೇ ಮಧುಮೇಹ,ರಕ್ತದೊತ್ತಡದ ಸಮಸ್ಯೆ, ಕ್ಯಾನ್ಸರ್ ಮುಂತಾದ ಕಾಯಿಲೆಗಳು.

ಡಾ. ಪುನೀತ್ ರಾಘವೇಂದ್ರ ಕುಂಟುಕಾಡು  BNYS, MD Yoga Clinical 

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...