ಈ ಹಿಂದೆ ಭಾಗ - 2ರಲ್ಲಿ ಮಧುಮೇಹಿಗಳ ಮುಂಜಾನೆಯ ಉಪಹಾರ ಹೇಗಿರಬೇಕು? ತಿಂಡಿ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವ ಅಂಶಗಳನ್ನು ಗಮನದಲ್ಲಿಟ್ಟುಕ್ಕೊಳ್ಳಬೇಕು? ಯಾವ ಬಗೆಯ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ವಿವರವಾಗಿ ತಿಳಿದುಕೊಂಡೆವು. ಮುಂದೆ ನಮ್ಮ ಮಧ್ಯಾಹ್ನದ ಊಟ ಹೇಗಿರಬೇಕೆಂದು ತಿಳಿದುಕೊಳ್ಳೋಣ. ನನ್ನಲ್ಲಿ ಬರುವ ಹೆಚ್ಚಿನ ಮಧುಮೇಹಿಗಳು ಕೇಳುವ ಬಹು ಮುಖ್ಯವಾದ ಪ್ರಶ್ನೆ "ಬೆಳಗ್ಗೆ,ರಾತ್ರಿ ಹೇಗೋ ಮನೆಯಲ್ಲಿ ಆಗುತ್ತದೆ. ಆದರೆ ಮಧ್ಯಾಹ್ನದ ಊಟವೇ ಕಷ್ಟ!! ಆಫೀಸ್ , ಹೊರಗಿನ ಕೆಲಸದ ಸುತ್ತಾಟದಿಂದ ಮಧ್ಯಾಹ್ನದ ಊಟ ಸರಿಯೇ ಆಗುವುದಿಲ್ಲ!!".
ಆದರಲ್ಲೂ ಹೆಚ್ಚಿನವರಿಗೆ ಕಾಡುವ ಬಹುದೊಡ್ಡ ಪ್ರಶ್ನೆ "ಮಧುಮೇಹಿಗಳು
ಮಾಂಸಾಹಾರ ತಿನ್ನಬಹುದೇ?"...ಮುಂದೆ ಓದಿ....
ಮಧ್ಯಾಹ್ನದ ಊಟದಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸಮಯಕ್ಕೆ ಸರಿಯಾಗಿ ಊಟ ಮಾಡುವುದು(ಮಧ್ಯಾಹ್ನ 12.30 ರಿಂದ
1.30 ರ ಒಳಗೆ.... 3.00 ಘಂಟೆಯ ಮೇಲೆ ಅಲ್ಲ!!). ಏಕೆಂದರೆ ಮಧ್ಯಾಹ್ನದ ಊಟ "ಶರೀರ ನಿರ್ಮಾಣದ ಆಹಾರ". ಅಂದರೆ ಮುಂಜಾನೆಯ ಉಪಹಾರ "ದಿನಪೂರ್ತಿ ಕೆಲಸ ಮಾಡಲು ಇಂಧನ"ವಾದರೆ ಮಧ್ಯಾಹ್ನದ ಊಟ"ಶರೀರದ ಬಲವರ್ಧನೆಗೆ, ಮಾಂಸಖಂಡಗಳ ಬೆಳವಣಿಗೆಗೆ, ಮೂಳೆಗಳನ್ನು ಗಟ್ಟಿಗೊಳಿಸುವಂತೆ" ದೇಹದ ನಿರ್ಮಾಣಕ್ಕೆ ಅತೀ ಅವಶ್ಯಕ. ಹಾಗಾಗಿ ಮಧ್ಯಾಹ್ನದ ಆಹಾರದಲ್ಲಿ ಬೇಳೆ ಕಾಳು, ಮೊಳಕೆ ಕಾಳು, ಬೇಯಿಸಿದ ಮೊಟ್ಟೆ(ಬೇಕೆನ್ನಿಸಿದರೆ ಮಾತ್ರ) ಮುಂತಾದ ಪ್ರೋಟೀನ್ ಯುಕ್ತ ಆಹಾರ, ಅನ್ನ- ಗಂಜಿ ಸೇರಿದಂತೆ ಪಿಷ್ಠ( ಕಾರ್ಬೋಹೈಡ್ರೇಟ್)ವೂ ಸೇರಿರಲಿ. ನಾರಿನಂಶವೂ ಸಾಕಷ್ಟು ಇದ್ದಲ್ಲಿ ಶರೀರದ ಪಚನ ಕ್ರಿಯೆಯೂ ಉತ್ತಮವಾಗಿರುವುದು. ಶರೀರಕ್ಕೆ ಸೇರುವ ಸಕ್ಕರೆಯ ಅಂಶವೂ ಕಡಿಮೆ ಇರುವುದು!! ಇಲ್ಲಿಯೂ ಕೂಡ ಆಹಾರ ಕಡಿಮೆ ಕ್ಯಾಲೋರಿ, ಹೆಚ್ಚು ಹೊಟ್ಟೆ ತುಂಬಿಸುವಂತದ್ದಾಗಿರಬೇಕು.
ದೈಹಿಕ ಚಟುವಟಿಕೆಯೂ ಗಮನದಲ್ಲಿರಲಿ.
ಮಾದರಿ ಆಹಾರ ಯೋಜನೆ :
* 2 ಚಪಾತಿ+ ಅನ್ನ( 100ಗ್ರಾಂ) + ಸೊಪ್ಪಿನ ಪಲ್ಯ+ ದಾಲ್+ ಮಜ್ಜಿಗೆ
*3 ಚಪಾತಿ+ದಾಲ್+ ಬೇಯಿಸಿದ ತರಕಾರಿ+ ತರಕಾರಿ ಸೂಪ್
*ಅನ್ನ(200ಗ್ರಾಮ್) + ಬೇಳೆ ಸಾರು+ ಹೀರೆಕಾಯಿ/ಬೆಂಡೆಕಾಯಿಯಂತಹ ನಾರಿನ ಪಲ್ಯ+ ಮಜ್ಜಿಗೆ
* ಬೇಯಿಸಿದ ಆಲೂಗಡ್ಡೆ( ಅಥವಾ ಇತರೆ ತರಕಾರಿಗಳು)+ ಬೇಯಿಸಿದ ಮೊಳಕೆಕಾಳು+ತರಕಾರಿ ಸೂಪ್
*ಬೇಳೆ ಕಾಳು ಹಾಕಿ ಬೇಯಿಸಿದ ಕಿಚಡಿ+ ಮಜ್ಜಿಗೆ/ಸೂಪ್
ಈ ರೀತಿ....
ಗಮನಿಸಿ:
*ಊಟ ಆದ ಮೇಲೆ 1 ಚಮಚ ಮೆಂತ್ಯೆ ಹುಡಿ ಮಜ್ಜಿಗೆ/ನೀರಿನ ಜೊತೆ ಸೇವಿಸುವುದರಿಂದ ಸಕ್ಕರೆಯ ಅಂಶ ಕಡಿಮೆಯಾಗುವುದು.
* ಊಟದಲ್ಲಿ ಸಿಕ್ಕಿದ ಬೆಳ್ಳುಳ್ಳಿ, ಕರಿ ಬೇವಿನ ಸೊಪ್ಪುಗಳನ್ನು ಬಿಸಾಡದೇ, ಚೆನ್ನಾಗಿ ಜಗಿದು ಸೇವಿಸುವುದು.ಅವುಗಳೂ ಸಕ್ಕರೆಯ ಅಂಶವನ್ನು ಮಿತಿಯಲ್ಲಿಡಲು ಸಹಾಯಕಾರಿ.
ಊಟದಲ್ಲಿ ಮಾಂಸಾಹಾರ ಸೇವಿಸಬಹುದೇ?
"ನಾನ್ ವೆಜ್" ಬಾಯಿಗೆ ರುಚಿಯೆಂದರೂ ಶರೀರಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಏಕೆಂದರೆ ಶರೀರ ಈಗಾಗಲೇ ಯೂರಿಯಾ, ಯೂರಿಕ್ ಆಸಿಡ್ ಗಳನ್ನು ಹೊರಹಾಕಲು ಮಲ, ಮೂತ್ರ , ಬೆವರಿನ ಮೂಲಕ ಪ್ರಯತ್ನಿಸುತ್ತಿರುತ್ತದೆ.
ಆದರೆ ಮಾಂಸ ಪದಾರ್ಥ ಸೇವಿಸಿದಾಗ ಶರೀರಕ್ಕೆ ಇನ್ನಷ್ಟು ಯೂರಿಯಾ, ಯೂರಿಕ್ ಆಸಿಡ್ ಸೇರಿಕೊಳ್ಳುತ್ತದೆ. ಅದರರ್ಥ ಅವುಗಳನ್ನು ಹೊರಹಾಕಲು ಶರೀರಕ್ಕೆ ಹೆಚ್ಚು ಹೆಚ್ಚು ಒತ್ತಡ ಕೊಟ್ಟಂತೆ. ಕೊನೆಗೆ ಕಾಯಿಲೆಗಳಿಗೆ ಆ ಒತ್ತಡಗಳೇ ಕಾರಣವಾಗುತ್ತವೆ!! ಹಾಗಿದ್ದೂ ಮಾಂಸಾಹಾರಗಳಲ್ಲಿ ಶರೀರಕ್ಕೆ ಬೇಕಾದ ಕೆಲವು ಬಗೆಯ ಪೋಷಕಾಂಶಗಳೂ ದೊರೆಯುತ್ತವೆ. ಅವೇ ಪೋಷಕಾಂಶಗಳು ಸಸ್ಯಾಹಾರದಲ್ಲೂ ದೊರೆಯುತ್ತವೆ. ಆದರೆ ಪ್ರಮಾಣ ಸ್ವಲ್ಪ ಕಡಿಮೆಯಷ್ಟೆ!! ಹಾಗಾಗಿ ಮಾಂಸಾಹಾರ ತಿನ್ನಲೇ ಬೇಕೆಂಬ ಅನಿವಾರ್ಯತೆಯಿಲ್ಲ!! ಇನ್ನು ಮಧುಮೇಹಿಗಳ ವಿಷಯಕ್ಕೆ ಬರೋಣ... ಮಾಂಸಾಹಾರ ತಿನ್ನಬೇಕೆಂಬ ಆಸೆಯಿದ್ದವರು ಮಧ್ಯಾಹ್ನ ಮಾತ್ರ ತೆಗೆದುಕೊಳ್ಳಿ. ಇದರಿಂದ ಶರೀರ ಶುದ್ಧಿಗೊಳ್ಳಲು ಸ್ವಲ್ಪ ಸಮಯವೂ ದೊರೆಯುತ್ತದೆ. ಗಮನಿಸಿ.....ಎಣ್ಣೆಯಲ್ಲಿ ಕರಿದ(ಡೀಪ್ ಫ್ರೈ), ಅಧಿಕ ಎಣ್ಣೆಯಲ್ಲಿ ಬೇಯಿಸಿದ ಮಾಂಸಾಹಾರ ಒಳ್ಳೆಯದಲ್ಲ. ಉದಾ: ಕಬಾಬ್, ಚಿಲ್ಲಿ, ಮಂಚೂರಿ... ಇತ್ಯಾದಿ. ಏಕೆಂದರೆ ಎಣ್ಣೆಯಲ್ಲಿ ದೀರ್ಘವಾಗಿ ಕರಿದಾಗ ಆಹಾರದಲ್ಲಿದ್ದ ಪೋಷಕಾಂಶಗಳು ಕರಿದ ಎಣ್ಣೆಯನ್ನು ಸೇರುತ್ತವೆಯೇ ಹೊರತು ದೇಹಕ್ಕಲ್ಲ!! ಶರೀರಕ್ಕೆ ಸೇರುವುದು ಕೇವಲ ಹೆಚ್ಚು ಇಂಗಾಲದ ತೈಲವಷ್ಟೆ!! (ಒಮೇಗಾ-3 ಫ್ಯಾಟಿ ಆಸಿಡ್ ಸಮುದ್ರ ಉತ್ಪನ್ನಗಳಲ್ಲಿ ಜಾಸ್ತಿ ಇರುತ್ತದೆ. ಆದರೆ ಎಣ್ಣೆಯಲ್ಲಿ ಮೀನನ್ನು ಕರಿದಾಗ ಒಮೇಗಾ-3 ಕರಿದ ಎಣ್ಣೆಯಲ್ಲಿ ಉಳಿಯುತ್ತದೆಯೇ ಹೊರತು, ದೇಹಕ್ಕೆ ತಲುಪುವುದೇ ಇಲ್ಲ!!). ತವಾ ಫ್ರೈ, ಸಾಂಬಾರ್, ತಂದೂರಿಗಳಲ್ಲಿ ಸ್ವಲ್ಪ ಪ್ರಮಾಣದ ಪೋಷಕಾಂಶಗಳು ದೊರೆಯಬಹುದು!!. ಹಾಗೆಂದು ಮಾಂಸಾಹಾರ ತಿಂದರೂ ಇತಿ ಮಿತಿಯಲ್ಲಿರಲಿ. ಅತಿಯಾದರೆ ಅಮೃತವೂ ವಿಷ... ನೆನಪಿರಲಿ!!
- ಡಾ. ಪುನೀತ್ ರಾಘವೇಂದ್ರ ಕುಂಟುಕಾಡು BNYS, MD Yoga Clinical
ಮಧುಮೇಹಿಗಳ ಸಕ್ಕರೆಯ ಅಂಶ ಗಣನೀಯವಾಗಿ ಹೆಚ್ಚಿಸುವುದು ರಾತ್ರಿಯ ಊಟ. ಇದನ್ನು ಸರಿಪಡಿಸಿಕೊಂಡು ಮಧುಮೇಹ ಮುಕ್ತರಾಗುವುದು ಹೇಗೆಂದು ಮುಂದಿನ ಭಾಗದಲ್ಲಿ ನಿರೀಕ್ಷಿಸಿ..
ನಿಮ್ಮ ಯಾವುದೇ ಸಂಶಯಗಳಿಗೆ ವೈದ್ಯರನ್ನು ನೇರವಾಗಿ ಸಂಪರ್ಕಿಸಬಹುದು.
+91 9901722763
(ಬುಧವಾರ ಸಂಜೆ 8.00 ರಿಂದ ರಾತ್ರಿ 10.00ರವರೆಗೆ ಮಾತ್ರ)
ಇತರೆ ಆರೋಗ್ಯ ಮಾಹಿತಿಗಳಿಗೆ ಇಲ್ಲಿ ನೋಡಿ...
ಶೇರ್ ಮಾಡಿ... ಇತರರಿಗೂ ತಿಳಿಸಿ...