"ಅಯ್ಯೋ... ಎಂಥಾ ಬಿಸಿಲು ಮಾರಾಯ್ರೆ... ಹೊರಗೆ ಕಾಲಿಡುವುದೇ ಕಷ್ಟ. ಚರ್ಮ ಸುಟ್ಟು ಹೋಗುವ ಭಯ! ಹಾಗೆಂದು ಮನೆ ಒಳಗೇ ಇದ್ರೆ ಸೆಖೆ. ಇನ್ನು ಫ್ಯಾನ್ ಹಾಕಿದ್ರೆ ಬರೀ ಬಿಸಿ ಗಾಳಿ. ತುಟಿ, ಬಾಯಿ ಒಣಗಿ ಉಸಿರಾಡುವುದೇ ಸಂಕಟ. ದೇಹವಂತೂ ಒಣಗಿ, ಎಷ್ಟು ನೀರು ಕುಡಿದರೂ ಸಾಲುವುದಿಲ್ಲ. ಇದೇ ಉಷ್ಣದಿಂದಲೋ ಏನೋ ಬೆನ್ನು,ಕೈಯಲ್ಲೆಲ್ಲಾ ಬೊಬ್ಬೆ. ಜೊತೆಗೆ ಬೆವರೂ ತಾಗಿದಾಗ ಉರಿಯಿಂದಾಗಿ ಮೈಯೆಲ್ಲಾ ಸಂಕಟ. ಅದೆಷ್ಟೇ ಹಣ್ಣಿನ ರಸ/ ತರಕಾರಿ ರಸ ಕುಡಿದರೂ ಶರೀರ ಸ್ವಲ್ಪ ಹಗುರವಾದಂಥ ಅನುಭವವೇ ಹೊರತು ಸಂಪೂರ್ಣ ಸಮಾಧಾನವೇ ಇಲ್ಲ. ಕೊನೆಗೆ 'ಈ ವರ್ಷದ ಬೇಸಿಗೆ ಮುಗಿಯುವಾಗ ನಾವು ಬದುಕಿರುತ್ತೇವೆಯೋ?' ಎಂಬ
ಅನುಮಾನ!! ಸಾಕಪ್ಪಾ ... ಒಮ್ಮೆ ಮಳೆಗಾಲ ಶುರುವಾದರೆ ಸಾಕು.." ಇದು ಕೇವಲ ಒಬ್ಬಿಬ್ಬರ ಅನುಭವವಲ್ಲ. ಪ್ರತಿನಿತ್ಯ ಪೇಪರ್/ ದೂರದರ್ಶನದ ವಾರ್ತೆಯಲ್ಲಿ 'ಬಿಸಿಗಾಳಿಯಿಂದ ಅಲ್ಲೊಂದು ಮರಣ' ಕೇಳಿದಾಗಲೆಲ್ಲ ನಮ್ಮಲ್ಲಿ ಮೂಡುವ ಕಳವಳ. ಹೌದು... ಸಂಪೂರ್ಣ ಭಾರತದಲ್ಲಿ ವಾತಾವರಣದ ಉಷ್ಣತೆ ಸಿಕ್ಕಾಪಟ್ಟೆ ಎನ್ನುವಷ್ಟು ಹೆಚ್ಚಾಗುತ್ತಿದೆ. ಜೊತೆಗೆ ಅದರಿಂದ ಶರೀರ ಮೇಲಾಗುವ ಪರಿಣಾಮ ಕೂಡ. ಇಕ್ವಿನೋಕ್ಸ್ ಪರಿಣಾಮದಿಂದ ಉಷ್ಣತೆ 40ಡಿಗ್ರಿಗೂ ದಾಟಬಹುದೆಂಬ ಭಯಾನಕ ಸಂದೇಶಗಳೂ ನಮ್ಮ ಮೊಬೈಲ್ ಗಳಲ್ಲಿ ಹರಿದಾಡುತ್ತಿವೆ. ಹಾಗಿದ್ದಾಗ ನಾವು ಆ ಅತೀ ಉಷ್ಣತೆಯ ಪರಿಣಾಮವನ್ನು ಎದುರಿಸಲು ಸಮರ್ಥರೇ? ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೇ?ಕೇವಲ ಸಾಕಷ್ಟು ನೀರು ಕುಡಿಯುವುದರಿಂದ ಶರೀರವನ್ನು ತಂಪಾಗಿಸಲು ಸಾಧ್ಯವಿಲ್ಲವಲ್ಲವೇ? ಇಲ್ಲಿದೆ ಉತ್ತರ... ಅದೇ ಅತ್ಯಂತ ಸರಳವಾದ ಅಭ್ಯಾಸ "ಶೀತಲೀ ಪ್ರಾಣಾಯಾಮ". ಶರೀರವನ್ನು ತಂಪಾಗಿಡಲು ಅತ್ಯಂತ ಪರಿಣಾಮಕಾರೀ ಉಪಾಯ.
ಅಭ್ಯಾಸ :
ಜಿಹ್ವಾಯಾ ವಾಯುಮಾಕೃಷ್ಯ ಪೂರ್ವವತ್ ಕುಂಭಸಾಧನಂ!
ಶನಕೈಘ್ರಾರ್ಣರನ್ಘ್ರಾಭ್ಯಾಂ ರೇಚರೇತ್ ಪವನಂ ಸುಧೀಃ!!(ಹಠಯೋಗ ಪ್ರದೀಪಿಕಾ, ದ್ವಿತೀಯೋಪದೇಶ,57)
ನಾಲಿಗೆಯನ್ನು ಪೂರ್ತಿಯಾಗಿ ಹೊರಚಾಚಿ ಪಕ್ಷಿಯ ಕೊಕ್ಕಿನಂತೆ ಹೊರಳಿಸಿ ವಾಯುವನ್ನು ಸೇವಿಸಬೇಕು. ನಂತರ ಉಸಿರನ್ನು ಬಿಗಿಹಿಡಿದು ಕುಂಭಕವನ್ನು ಮಾಡಬೇಕು. ಕೊನೆಯಲ್ಲಿ ಅಭ್ಯಾಸಿಯು ಮೂಗಿನ ಎರಡೂ ಹೊರಳೆಗಳಿಂದ ವಾಯುವನ್ನು ಮೆಲ್ಲಗೆ ಹೊರಬಿಡಬೇಕು.
ಸೂಚನೆ:
* ಅಭ್ಯಾಸದ ಸಮಯದಲ್ಲಿ ಬೆನ್ನು ಕತ್ತು ನೇರವಾಗಿರಬೇಕು.
* ಊಟವಾದ ತಕ್ಷಣ ಅಭ್ಯಾಸ ಸೂಕ್ತವಲ್ಲ. ಕನಿಷ್ಟ 30 ನಿಮಿಷಗಳ ಅಂತರವಿರಲಿ.
* ಆರಂಭದಲ್ಲಿ ಅಭ್ಯಾಸಕ್ಕೆ ತೊಡಗುವವರು ಕುಂಭಕ (ದೀರ್ಘವಾಗಿ ಶ್ವಾಸ ತೆಗೆದುಕೊಂಡ ನಂತರ ಸಾಧ್ಯವಾದಷ್ಟು ಹೊತ್ತು ಉಸಿರು ಬಿಗಿ ಹಿಡಿದು ನಂತರ ನಿಧಾನವಾಗಿ ಹೊರಬಿಡುವುದು) ಅಭ್ಯಾಸ ಮಾಡಬೇಕೆಂದಿಲ್ಲ. ಸರಳವಾಗಿ ಶ್ವಾಸೋಶ್ವಾಸದಿಂದಲೇ (ಆಂದರೆ ನಾಲಿಗೆಯ ಮೂಲಕ) ಆರಂಭಿಸಬಹುದು.
* 30ರಿಂದ 50 ಸುತ್ತುಗಳಂತೆ ದಿನಕ್ಕೆ 5 ಬಾರಿ ಅಭ್ಯಾಸ ಮಾಡುವುದರಿಂದ ಅತ್ಯದ್ಭುತ ಪರಿಣಾಮವನ್ನು ಪಡೆಯಬಹುದು.
* ದಿನನಿತ್ಯದ ಕೆಲಸದ ಸಂದರ್ಭದಲ್ಲಿ ಅಭ್ಯಾಸ ಮಾಡುವುದು ಸ್ವಲ್ಪ ಕಷ್ಟಕರ. ಹಾಗಿದ್ದೂ ಕೆಲವು ರೀತಿಯ ಉದ್ಯೋಗಿಗಳಿಗೆ ಸಾಧ್ಯ. ಉದಾ: ಕಂಪ್ಯೂಟರ್ ಕೆಲಸ ನಿರ್ವಹಿಸುವವರು ಕೆಲಸದ ಮಧ್ಯದಲ್ಲಿ ಸ್ವಲ್ಪ ವಿಶ್ರಾಂತಿಗೋಸ್ಕರವೆಂದು ನೇರವಾಗಿ ಕುಳಿತು ಆಭ್ಯಾಸ ಮಾಡಬಹುದು.
ಉಪಯೋಗಗಳು:
ಗುಲ್ಮಪ್ಲೀಹಾದಿಕಾನ್ ರೋಗಾನ್ ಜ್ವರಂ ಪಿತ್ತಂ ಕ್ಷುಧಾಂ ತೃಷಾಂ!
ವಿಷಾಣಿ ಶೀತಲೀ ನಾಮ ಕುಂಭಿಕೇಯಂ ನಿಹಾಂತಿ ಹಿ!!(ಹಠಯೋಗ ಪ್ರದೀಪಿಕಾ, ದ್ವಿತೀಯೋಪದೇಶ,58)
ಈ ಶೀತಲೀ ಎಂಬ ಕುಂಭಕ ಪ್ರಾಣಾಯಾಮವು ಗುಲ್ಮ, ಯಕೃತ್ ಸಂಬಂಧಿಸಿದ ರೋಗಗಳನ್ನು, ಜ್ವರ, ಪಿತ್ತ, ಹಸಿವು ನೀರಡಿಕೆ ಹಾಗೂ ವಿಷಗಳ ಪ್ರಭಾವಗಳನ್ನು ನಾಶಗೊಳಿಸುವುದು.
* ಶೀತಲೀ ಹೆಸರೇ ಸೂಚಿಸುವಂತೆ ಶರೀರಕ್ಕೆ ಶೀತ/ ತಂಪನ್ನುಂಟುಮಾಡುವುದು.
* ಹೊಟ್ಟೆ ಉರಿ, ಅಸಿಡಿಟಿ ಇರುವಾಗ ಅಭ್ಯಾಸ ಮಾಡಿದಲ್ಲಿ ಸಮಸ್ಯೆಗಳು ತಕ್ಷಣವೇ ಉಪಶಮನವಾಗುವುದು.
* ಬಾಯಾರಿಕಯಾಗುತ್ತಿದ್ದು, ನಾಲಿಗೆ ಒಣಗಿದ ಅನುಭವವಾಗುತ್ತಿದ್ದರೆ ಈ ಪ್ರಾಣಾಯಾಮವೊಂದು ಉತ್ತಮ ಪರಿಹಾರ.
ಮುನ್ನೆಚ್ಚರಿಕೆ:
ಅಸ್ತಮಾ, ಸೈನುಸೈಟಿಸ್ ಸಮಸ್ಯೆಯಿರುವವರು ಹವಾಮಾನ ತಂಪಾಗಿದ್ದಾಗ ಅಭ್ಯಾಸ ಮಾಡದಿರುವುದು ಸೂಕ್ತ.
- ಡಾ.ಪುನೀತ್ ರಾಘವೇಂದ್ರ BNYS, MD (Yoga Clinical)